ಬಲೂಚಿಸ್ತಾನದಲ್ಲಿ ಬಾಂಬ್ ಸ್ಫೋಟ: ಪಾಕ್ ಪತ್ರಕರ್ತ ಮೃತ್ಯು

Update: 2021-10-11 17:21 GMT

ಕ್ವೆಟ್ಟಾ, ಅ.11: ಬಲೂಚಿಸ್ತಾನ ಪ್ರಾಂತದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಪತ್ರಕರ್ತ ಶಹೀದ್ ಝೆಹ್ರಿ ಮೃತಪಟ್ಟಿದ್ದಾರೆ. ನಿಷೇಧಿತ ಉಗ್ರ ಸಂಘಟನೆ ಬಲೂಚಿಸ್ತಾನ ವಿಮೋಚನಾ ಪಡೆ ಈ ಕೃತ್ಯ ಎಸಗಿದೆ ಎಂದು ಸೋಮವಾರ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದ ಮೆಟ್ರೋ 1 ನ್ಯೂಸ್ ಟಿವಿ ಚಾನೆಲ್‌ನ ವರದಿಗಾರನಾಗಿರುವ 35 ವರ್ಷದ ಝೆಹ್ರಿ ಬಲೂಚಿಸ್ತಾನದ ಹಬ್ ನಗರದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಾರಿನ ಮೇಲೆ ಬಾಂಬ್ ಎಸೆಯಲಾಗಿದ್ದು ಝೆಹ್ರಿ ಹಾಗೂ ಮತ್ತೋರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣ ನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಒದಗಿಸಿ, ಕರಾಚಿಯ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಝೆಹ್ರಿ ಮೃತರಾಗಿದ್ದಾರೆ. ಮತ್ತೊಬ್ಬ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮದ ವರದಿ ಹೇಳಿದೆ.

ಕಾರು ಸಂಚರಿಸುತ್ತಿದ್ದ ರಸ್ತೆ ಪಕ್ಕದಲ್ಲಿ ಬಾಂಬ್ ಸ್ಫೋಟಿಸಿದ ಬಳಿಕ ಕಾರು ಗಾಳಿಯಲ್ಲಿ ಮೇಲಕ್ಕೇರಿ ವಿರುದ್ಧ ದಿಕ್ಕಿಗೆ ತಿರುಗಿ ಉರುಳಿಬಿದ್ದ ದೃಶ್ಯ ಅಲ್ಲಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ದಾಳಿಗೆ ನಿಷೇಧಿತ ಉಗ್ರ ಸಂಘಟನೆ ಬಲೂಚಿಸ್ತಾನ ವಿಮೋಚನಾ ಪಡೆ ಹೊಣೆ ಹೊತ್ತುಕೊಂಡಿದೆ ಎಂದು ಸರಕಾರಿ ಮೂಲಗಳು ಹೇಳಿವೆ.


ಪಾಕಿಸ್ತಾನದಲ್ಲಿ 2020ರಲ್ಲಿ , ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಕನಿಷ್ಟ 10 ಪತ್ರಕರ್ತರನ್ನು ಹತ್ಯೆ ಮಾಡಲಾಗಿದ್ದು ಇತರ ಹಲವರಿಗೆ ಬೆದರಿಕೆ, ಕಿರುಕುಳ ಒಡ್ಡಲಾಗಿದೆ ಅಥವಾ ಅಪಹರಿಸಲಾಗಿದೆ ಎಂದು ಪಾಕಿಸ್ತಾನ ದಿನಪತ್ರಿಕೆ ಸಂಪಾದಕರ ಸಮಿತಿ(ಸಿಪಿಎನ್ಇ)ಯ ವರದಿಯನ್ನು ಉಲ್ಲೇಖಿಸಿ ದಿ ಡಾನ್ ವರದಿ ಮಾಡಿದೆ. . ಪತ್ರಕರ್ತರಿಗೆ ರಕ್ಷಣೆ ಒದಗಿಸಲು ಅಥವಾ ನ್ಯಾಯ ಒದಗಿಸಲು ದೇಶದ ಕಾನೂನು ವ್ಯವಸ್ಥೆ ವಿಫಲವಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸಿಪಿಎನ್ಇ ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News