ಐಪಿಎಲ್: ಕೆಕೆಆರ್ ಗೆಲುವಿನ ಕೇಕೆ, ಆರ್ ಸಿಬಿ ನಿರ್ಗಮನ

Update: 2021-10-11 17:53 GMT
photo: twitter.com/ESPNcricinfo

ಶಾರ್ಜಾ: ಕೋಲ್ಕತಾ ನೈಟ್ ರೈಡರ್ಸ್ ತಂಡ  ಐಪಿಎಲ್ ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ 4 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.  ಆದರೆ ಫೈನಲ್ ಗೆ ತೇರ್ಗಡೆಯಾಗಲು ಆ.13ರಂದು ಶಾರ್ಜಾದಲ್ಲಿ ನಡೆಯಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಬೇಕಾಗಿದೆ. ಕೊನೆಯ ತನಕ ಹೋರಾಡಿ ಸೋತಿರುವ ಆರ್ ಸಿಬಿ 14ನೇ ಆವೃತ್ತಿಯ ಐಪಿಎಲ್ ನಲ್ಲಿ ತನ್ನ ಅಭಿಯಾನ ಮುಕ್ತಾಯಗೊಳಿಸಿತು.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆರ್ ಸಿಬಿ  ತಂಡ ಕೆಕೆಆರ್ ಸ್ಪಿನ್ನರ್ ಸುನೀಲ್ ನರೇನ್ (4-21)ದಾಳಿಗೆ ನಲುಗಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 138  ರನ್ ಗಳಿಸಲಷ್ಟೇ ಶಕ್ತವಾಯಿತು. ಗೆಲ್ಲಲು 139 ರನ್ ಗುರಿ ಬೆನ್ನಟ್ಟಿದ ಕೆಕೆಆರ್ 19.4 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 139 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕೆಕೆಆರ್ ಪರ ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್ (29 ರನ್)ಸರ್ವಾಧಿಕ ಸ್ಕೋರ್ ಗಳಿಸಿದರು.

ವೆಂಕಟೇಶ್ ಅಯ್ಯರ್ (26), ಸುನೀಲ್ ನರೇನ್(26), ನಿತೀಶ್ ರಾಣಾ(23) ಹಾಗೂ ದಿನೇಶ್ ಕಾರ್ತಿಕ್(10)ಎರಡಂಕೆಯ ಸ್ಕೋರ್ ಗಳಿಸಿದರು.

ಅಯ್ಯರ್ ಜೊತೆಗೆ ಇನಿಂಗ್ಸ್ ಆರಂಭಿಸಿದ ಗಿಲ್ 5.2 ಓವರ್ ಗಳಲ್ಲಿ 41 ರನ್ ಗಳಿಸಿ ಸಾಧಾರಣ ಆರಂಭ ಒದಗಿಸಿದರು.

ಆರ್ ಸಿಬಿ ಪರವಾಗಿ ಮುಹಮ್ಮದ್ ಸಿರಾಜ್(2-19), ಹರ್ಷಲ್ ಪಟೇಲ್(2-19) ಹಾಗೂ ಯಜುವೇಂದ್ರ ಚಹಾಲ್(2-16)ತಲಾ ಎರಡು ವಿಕೆಟ್ ಗಳನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News