ಲಖಿಂಪುರ ಹಿಂಸಾಚಾರ ಪ್ರಕರಣ:ಅ.13 ರಂದು ಕಾಂಗ್ರೆಸ್ ನಿಯೋಗದಿಂದ ರಾಷ್ಟ್ರಪತಿ ಕೋವಿಂದ್ ಭೇಟಿ

Update: 2021-10-12 08:20 GMT

 ಹೊಸದಿಲ್ಲಿ: ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರ ನಿಯೋಗವು ಬುಧವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ಭೇಟಿ ಮಾಡಲಿದ್ದು, ಲಖಿಂಪುರ ಖೇರಿ ಹಿಂಸಾಚಾರದ ಕುರಿತು ಸತ್ಯಾಂಶಗಳ ಜ್ಞಾಪನಾ ಪತ್ರವನ್ನು ಮಂಡಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಏಳು ಸದಸ್ಯರ ನಿಯೋಗವು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಹಿರಿಯ ನಾಯಕರಾದ ಎ.ಕೆ. ಆ್ಯಂಟನಿ ,ಗುಲಾಂ ನಬಿ ಆಝಾದ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ  ಕೆ.ಸಿ. ವೇಣುಗೋಪಾಲ್ ಅವರನ್ನು ಒಳಗೊಂಡಿರುತ್ತದೆ.

ಈ ನಿಟ್ಟಿನಲ್ಲಿ ಸಮಯ ಕೋರಿ ರಾಷ್ಟ್ರಪತಿ ಅವರಿಗೆ ಕಾಂಗ್ರೆಸ್ ಪಕ್ಷವು ಪತ್ರ ಬರೆದಿತ್ತು.

ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ರೈತರನ್ನು ಹತ್ಯೆ ಮಾಡಿದ ಆರೋಪದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಮಗ ಆಶಿಶ್ ನನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ. ಹೀಗಾಗಿ ಮಿಶ್ರಾ ಅವರನ್ನು ವಜಾಗೊಳಿಸಬೇಕು ಹಾಗೂ ರೈತರ  ಹತ್ಯೆ ಮಾಡಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶ ಹಾಗೂ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿರುವ ಹೊರತಾಗಿಯೂ ತಪ್ಪಿತಸ್ಥರ ವಿರುದ್ಧ ಅಥವಾ ಸಚಿವರ ವಿರುದ್ಧ ಯಾವುದೇ ನಿರ್ಣಾಯಕ ಕ್ರಮ ಕೈಗೊಂಡಿಲ್ಲ ಎಂದು ವೇಣುಗೋಪಾಲ್  ವಿಷಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News