ಸರಕಾರಿ ಶಾಲೆಗೂ ಹೊಸರೂಪ: ಶಾಸಕ ವೇದವ್ಯಾಸ್ ಕಾಮತ್

Update: 2021-10-12 13:29 GMT

ಮಂಗಳೂರು, ಅ.12: ಸ್ಮಾರ್ಟ್‌ಸಿಟಿ ಯೋಜನೆಯಡಿ ಸರಕಾರಿ ಶಾಲೆಗಳನ್ನು ಸ್ಮಾರ್ಟ್ ಸ್ಕೂಲ್ ಆಗಿ ಪರಿವರ್ತಿಸಿ ಹೊಸ ರೂಪ ನೀಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಪ್ರಯೋಗ ಮಾಡಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಬೋಳಾರ ವಾರ್ಡಿನ ಕಿರಿಯ ಪ್ರಾಥಮಿಕ ಶಾಲೆಯನ್ನು ಆಧುನೀಕರಣಗೊಳಿಸಿ ಸ್ಮಾರ್ಟ್ ಸ್ಕೂಲ್ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು. ಕಾಲಕ್ಕೆ ತಕ್ಕಂತೆ ವ್ಯವಸ್ಥೆಗಳನ್ನು ಬದಲಾಯಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಶಾಲೆಗಳನ್ನು ಆಧುನೀಕರಣಗೊಳಿಸಿ, ಮಕ್ಕಳಿಗೆ ಶಿಕ್ಷಣ ನೀಡಲು ಸ್ಮಾರ್ಟ್‌ಸಿಟಿ ಯೋಜನೆಯಿಂದ ಬೋಳಾರ ಶಾಲೆಯನ್ನು ಸಂಪೂರ್ಣವಾಗಿ ಆಧುನೀಕರಣಗೊಳಿಸಲಾಗಿದೆ ಎಂದರು.

1.25 ಕೋಟಿ ರೂ. ಅನುದಾನದಲ್ಲಿ ಪ್ರಮುಖವಾಗಿ ಹೆಂಚು, ಪಕ್ಕಾಸು, ಬದಲಾಯಿಸಲಾಗಿದೆ. ಇಡೀ ಶಾಲೆಗೆ ಟೈಲ್ಸ್ ಅಳವಡಿಸಲಾಗಿದೆ. ಹೊರಾಂಗಣದಲ್ಲಿ ಟೈಲ್ಸ್, ಗೋಡೆಗಳಿಗೆ ಪ್ಲಾಸ್ಟರಿಂಗ್, ಸಂಪೂರ್ಣ ಶಾಲೆಗೆ ಬಣ್ಣ ಬಳಿದು ಸುಂದರಗೊಳಿಸಲಾಗಿದೆ. ಬಾಗಿಲು ಕಿಟಿಕಿ, ಆರ್‌ಸಿಸಿ ಕಟ್ಟಡಗಳ ಮೇಲೆ ವಾಟರ್ ಪ್ರೂಫಿಂಗ್ ಮಾಡಲಾಗಿದೆ. ಶೌಚಾಲಯಗಳನ್ನು ಸಂಪೂರ್ಣವಾಗಿ ನವೀಕರಿಸಲಾಗಿದೆ ಎಂದರು.

ಶಾಲಾ ವಾರ್ಷಿಕೋತ್ಸವ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ವೇದಿಕೆ, ವಿದ್ಯುತ್ ತಂತಿ, ನೀರಿನ ಕೊಳವೆ, ಫ್ಯಾನ್ ಹಾಗೂ ಟ್ಯೂಬ್‌ಲೈಟ್‌ಗಳನ್ನು ಸಂಪೂರ್ಣವಾಗಿ ಬದಲಿಸಿದ್ದೇವೆ. ಶಾಲೆಯ ಆವರಣದಲ್ಲಿ ಹುಲ್ಲು ಹಾಸು, ಹೂವಿನ ಗಿಡಗಳನ್ನು ನೆಡಲಾಗಿದೆ. ವಾಲಿಬಾಲ್ ಕ್ರೀಡಾಂಗಣ ನಿರ್ಮಿಸಲಾಗಿದೆ. ಹೊರಾಂಗಣದಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ಮಳೆನೀರು ಚರಂಡಿಗಳನ್ನು ಕೂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪ ಮೇಯರ್ ಸುಮಂಗಲ ರಾವ್, ರಾಜ್ಯ ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಲೋಕೇಶ್ ಬೊಳ್ಳಾಜೆ, ಲೀಲಾವತಿ ಪ್ರಕಾಶ್, ಶೋಭಾ ರಾಜೇಶ್, ಸ್ಥಳೀಯ ಕಾರ್ಪೊರೇಟರ್ ರೇವತಿ ಶ್ಯಾಮ್‌ಸುಂದರ್, ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News