ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ

Update: 2021-10-12 17:41 GMT

ಭಟ್ಕಳ: ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೆಳಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಟಕೋಣ ದೇವಸ್ಥಾನದ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮವನ್ನು ಮಾಜಿ ಶಾಸಕ ಮಂಕಾಳ ವೈದ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಗಾಂಧೀಜೀಯವರ ಸ್ವರಾಜ್ಯದ ಕನಸು ನನಸಾಗಬೇಕು. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮ ದೊಡ್ಡದಾಗಿದೆ. ಪ್ರತಿ ಗ್ರಾ.ಪಂ. ಮಟ್ಟದಲ್ಲೂ ಪಕ್ಷದಿಂದ ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮದ ಮಹತ್ವದ ಕುರಿತು ತಿಳಿಸಿಕೊಡುವ ಕಾರ್ಯವನ್ನು ಪಕ್ಷ ಮಾಡುತ್ತಿದೆ.  ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಬೇಕಿದೆ. ದೇಶದಲ್ಲಿ ತೈಲ, ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಬೆಲೆ ಏರಿಕೆ ತಡೆಯುವಲ್ಲಿ ಕೇಂದ್ರ, ರಾಜ್ಯ ಸರಕಾರಗಳೆರಡೂ ವಿಫಲವಾಗಿದೆ. ಸರಕಾರ ಕೃಷಿ ಸೇರಿದಂತೆ ಅನೇಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದು ರೈತರಿಗೆ ಮಾರಕವಾಗಿದೆ. ಕೃಷಿ ಸೇರಿದಂತೆ ವಿವಿಧ ಕಾಯ್ದೆಗಳ ತಿದ್ದುಪಡಿ ವಾಪಾಸ್ ಪಡೆಯುವಂತೆ ಹೋರಾಟ, ಪ್ರತಿಭಟನೆ ನಡೆಸಲಾಗುತ್ತಿದ್ದರೂ ಸರಕಾರಕ್ಕೆ ಕಣ್ಣು-ಕಿವಿಗಳೇ ಇಲ್ಲ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ  ಕಾಂಗ್ರೆಸ್ ಕಾರ್ಯಕರ್ತರು ಸಂಘಟಿತರಾಗಿ ಪಕ್ಷ ಬಲಪಡಿಸಬೇಕು. ಸರಕಾರದ ಜನವಿರೋಧಿ ನೀತಿಯ ಬಗ್ಗೆ ಜನತೆಗೆ ಮನವರಿಕೆ ಮಾಡಿಕೊಡಬೇಕು. ದಿನಂಪ್ರತಿ ತೈಲ, ಗ್ಯಾಸ್, ಅಗತ್ಯವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಜನಸಾಮಾನ್ಯರು ತೀರಾ ತೊಂದರೆಗೆ ಸಿಲುಕಿದ್ದಾರೆ ಎಂದರು. ಕಾಂಗ್ರೆಸ್ ಹಿಂದುಳಿದ ವಿಭಾಗದ ಅಧ್ಯಕ್ಷ ವಿಷ್ಣು ದೇವಡಿಗ, ಬೆಳ್ಕೆ ಜಿ.ಪಂ. ಉಸ್ತುವಾರಿ ಹಾಗೂ ಬೆಳಕೆ ಸೊಸೈಟಿ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ, ಕಿಸಾನ್ ಸೆಲ್‍ನ ಅಧ್ಯಕ್ಷ ನಾರಾಯಣ ನಾಯ್ಕ, ಕಾನೂನು ವಿಭಾಗದ ಅಧ್ಯಕ್ಷ ಪಾಂಡು ನಾಯ್ಕ, ಪ್ರಮುಖರಾದ ಭಾಸ್ಕರ ಮೊಗೇರ, ಮೀನುಗಾರರ ಫೆಡರೇಶನ್ ನಿರ್ದೇಶಕ ದಿವಾಕರ ಮೊಗೇರ, ಖಚಾಂಚಿ ದೇವಿದಾಸ ಆಚಾರಿ, ಪ್ರಚಾರ ಸಮಿತಿಯ ಸತೀಶ ಆಚಾರಿ,  ಯುವ ಕಾಂಗ್ರೆಸ್ ಅಧ್ಯಕ್ಷ ದಯಾನಂದ ನಾಯ್ಕ, ಪಾಂಡುರಂಗ ನಾಯ್ಕ, ಮೋಹನ ನಾಯ್ಕ ಗೊರ್ಟೆ, ವೆಂಕಟ ಪೂಜಾರಿ, ಹರೀಶ ನಾಯ್ಕ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News