ಶ್ರೀನಗರ; ಅಡಗುತಾಣಗಳ ಮೇಲೆ ದಾಳಿ: ಐವರು ಉಗ್ರರ ಹತ್ಯೆ

Update: 2021-10-13 04:24 GMT
ಸಾಂದರ್ಭಿಕ ಚಿತ್ರ

ಶ್ರೀನಗರ: ಉಗ್ರಗಾಮಿಗಳ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆಯ ಐದು ಮಂದಿ ಮೃತಪಟ್ಟ ಬೆನ್ನಲ್ಲೇ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಮುಂದುವರಿಸಿದ ಭದ್ರತಾ ಪಡೆ ಸಿಬ್ಬಂದಿ ಪಾಕಿಸ್ತಾನ ಬೆಂಬಲಿತ ಟಿಆರ್‌ಎಫ್ ಸಂಘಟನೆಯ ಐದು ಮಂದಿಯನ್ನು ಹತ್ಯೆ ಮಾಡಿದ್ದಾರೆ.

ದಕ್ಷಿಣ ಶೋಪಿಯಾನ್‌ನ ಅಡಗುತಾಣಗಳ ಮೇಲೆ ನಡೆಸಿದ ದಾಳಿಯಲ್ಲಿ ಈ ಉಗ್ರರನ್ನು ಹತ್ಯೆ ಮಾಡಲಾಗಿದೆ. ಕಳೆದ ಒಂದು ವಾರದಲ್ಲಿ ಏಳು ಮಂದಿ ನಾಗರಿಕರನ್ನು ಹತ್ಯೆ ಮಾಡಿದ ಸಂಘಟನೆಯನ್ನು ಬೇಧಿಸುವ ಕಾರ್ಯಾಚರಣೆ ಆರಂಭಿಸಿದೆ. ಮೃತ ಉಗ್ರರು, ಅಕ್ಟೋಬರ್ 5ರಂದು ಶ್ರೀನಗರದಲ್ಲಿ ವೀರೇಂದ್ರ ಪಾಸ್ವಾನ್ ಎಂಬ ವಲಸೆ ವ್ಯಾಪಾರಿಯ ಹತ್ಯೆಗೆ ಕಾರಣರಾಗಿದ್ದರು ಎನ್ನಲಾಗಿದೆ.

ಜೆಸಿಓ ಹಾಗೂ ನಾಲ್ವರು ಸೈನಿಕರನ್ನು ಸೋಮವಾರ ಪೂಂಚ್‌ನಲ್ಲಿ ಉಗ್ರರು ಹತ್ಯೆ ಮಾಡಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿ ಯಾಗಿದ್ದರು. ಶೋಪಿಯಾನ್‌ನಲ್ಲಿ ರಾತ್ರಿಯಿಡೀ ನಡೆದ ಉಗ್ರಗಾಮಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಸತತ ಎರಡನೇ ದಿನವೂ ಯಶಸ್ಸು ಸಿಕ್ಕಂತಾಗಿದೆ. ಬಂಡಿಪು ಮತ್ತು ಅನಂತನಾಗ್‌ನಲ್ಲಿ ಒಂದು ದಿನ ಮುನ್ನ ಇಬ್ಬರು ಟಿಆರ್‌ಎಫ್ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಈ ಪೈಕಿ ಓರ್ವ ಬಂಡೀಪುರದಲ್ಲಿ ನಾಗರಿಕರೊಬ್ಬರ ಹತ್ಯೆಗೆ ಕಾರಣನಾಗಿದ್ದ ಎಂದು ತಿಳಿದುಬಂದಿದೆ.

"ಸೋಮವಾರ ರಾತ್ರಿ ಶೋಪಿಯಾನ್‌ನ ತುಲ್ರನ್ ಮತ್ತು ಫೀರಿಪುರ ಗ್ರಾಮಗಳಲ್ಲಿ ಉಗ್ರರ ಇರುವಿಕೆ ಬಗ್ಗೆ ಲಭ್ಯವಾದ ನಿರ್ದಿಷ್ಟ ಮಾಹಿತಿ ಆಧಾರದಲ್ಲಿ ಪೊಲೀಸರು, ಸೇನೆಯ 34 ರಾಷ್ಟ್ರೀಯ ರೈಫಲ್ ಹಾಗೂ ಸಿಆರ್‌ಪಿಎಫ್ ಜಂಟಿ ದಾಳಿ ನಡೆಸಿದವು. ಉಗ್ರರಿಗೆ ಪದೇ ಪದೇ ಶರಣಾಗತರಾಗುವಂತೆ ಅವಕಾಶ ನೀಡಲಾಯಿತು. ಶರಣಾಗುವ ಬದಲು ಭದ್ರತಾ ಪಡೆ ಸಿಬ್ಬಂದಿಯತ್ತ ಗುಂಡಿನ ದಾಳಿ ನಡೆಸಲು ಆರಂಭಿಸಿದಾಗ ಪ್ರತಿದಾಳಿ ನಡೆಸಲಾಯಿತು" ಎಂದು ಉನ್ನತ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News