ಕೆಲವು ವರ್ಗಗಳ ಮಹಿಳೆಯರಿಗೆ 24 ವಾರಗಳವರೆಗೆ ಗರ್ಭಪಾತಕ್ಕೆ ಅನುಮತಿ

Update: 2021-10-13 16:32 GMT

ಹೊಸದಿಲ್ಲಿ, ಅ.13: ದುರ್ಬಲ ಮಹಿಳೆಯರ ಕೆಲವು ವರ್ಗಗಳಿಗೆ ಗರ್ಭಪಾತಕ್ಕೆ ಗರಿಷ್ಠ ಸಮಯಾವಕಾಶದ ಮಿತಿಯನ್ನು ಬುಧವಾರ ಪರಿಷ್ಕರಿಸಿರುವ ಕೇಂದ್ರ ಸರಕಾರವು ಅದನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಿದೆ.ವೈದ್ಯಕೀಯ ಗರ್ಭಪಾತ (ತಿದ್ದುಪಡಿ) ನಿಯಮಗಳು,2021ರಡಿ ಹೊಸ ನಿಯಮಗಳನ್ನು ಕೇಂದ್ರವು ಅಧಿಸೂಚಿಸಿದೆ.

ಲೈಂಗಿಕ ದೌರ್ಜನ್ಯ,ಅತ್ಯಾಚಾರ ಮತ್ತು ನಿಷಿದ್ಧ ಸಂಭೋಗಕ್ಕೆ ಒಳಗಾದ ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಕರಿಗೆ ಈ ನಿಯಮಗಳು ಅನ್ವಯಿಸಲಿವೆ. ಮಾನಸಿಕ ಅಸ್ವಸ್ಥತೆ ಮತ್ತು ದೈಹಿಕ ವೈಕಲ್ಯಗಳನ್ನು ಹೊಂದಿರುವ ಮಹಿಳೆಯರಿಗೂ ಈ ನಿಯಮಗಳು ಅನ್ವಯಗೊಳ್ಳುತ್ತವೆ.

ಗರ್ಭವನ್ನು ಧರಿಸಿದ್ದಾಗ ಅಪಾಯದ ಅಥವಾ ತುರ್ತು ಸ್ಥಿತಿಯಲ್ಲಿರುವ ಮಹಿಳೆಯರು ಮತ್ತು ಗರ್ಭಿಣಿಯಾಗಿದ್ದಾಗ ವೈವಾಹಿಕ ಸ್ಥಿತಿ ಬದಲಾಗಿರುವ ಮಹಿಳೆಯರಿಗೂ 24 ವಾರಗಳವರೆಗೆ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗಿದೆ.

 ಹಿಂದಿನ ನಿಯಮಗಳಲ್ಲಿ 12 ವಾರಗಳ ಒಳಗೆ ಗರ್ಭಪಾತಕ್ಕೆ ಓರ್ವ ವೈದ್ಯರ ಮತ್ತು 12ರಿಂದ 20 ವಾರಗಳ ನಡುವೆ ಗರ್ಭಪಾತಕ್ಕೆ ಇಬ್ಬರು ವೈದ್ಯರ ಅನುಮತಿ ಅಗತ್ಯವಾಗಿತ್ತು.

ಭ್ರೂಣ ವಿರೂಪಗೊಂಡ ಪ್ರಕರಣಗಳಲ್ಲಿ 24 ವಾರಗಳ ನಂತರ ಗರ್ಭಪಾತ ಸಾಧ್ಯವೇ ಎನ್ನುವುದನ್ನು ನಿರ್ಧರಿಸಲು ರಾಜ್ಯಮಟ್ಟದ ವೈದ್ಯಕೀಯ ಮಂಡಳಿಗಳ ರಚನೆಗೆ ನಿಯಮಗಳಲ್ಲಿ ಸೂಚಿಸಲಾಗಿದೆ. ಮಹಿಳೆ ಮತ್ತು ಆಕೆಯ ವರದಿಗಳ ತಪಾಸಣೆಯ ಬಳಿಕ ಮನವಿಯನ್ನು ಸಲ್ಲಿಸಿದ ಮೂರು ದಿನಗಳಲ್ಲಿ ಮಂಡಳಿಯು ಗರ್ಭಪಾತದ ತನ್ನ ಅಭಿಪ್ರಾಯವನ್ನು ನೀಡಲಿದೆ ಮತ್ತು ಕೋರಿಕೆಯು ಸಲ್ಲಿಕೆಯಾದ ಐದು ದಿನಗಳಲ್ಲಿ ಸುರಕ್ಷಿತ ಗರ್ಭಪಾತ ನಡೆಯುವಂತೆ ನೋಡಿಕೊಳ್ಳಲಿದೆ.

ಮಾ.5ರಂದು ಗರ್ಭಪಾತ ಕಾನೂನಿಗೆ ತಿದ್ದುಪಡಿ ತಂದ ನಂತರ ಲಿಂಗ ಮತ್ತು ಸಂತಾನೋತ್ಪತ್ತಿ ಹಕ್ಕುಗಳ ಕಾರ್ಯಕರ್ತರಿಂದ ಟೀಕೆಗಳು ವ್ಯಕ್ತವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News