ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಅಕ್ಟೋಬರ್ 20ಕ್ಕೆ ಮುಂದೂಡಿಕೆ
ಹೊಸದಿಲ್ಲಿ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸತತ ಎರಡನೇ ದಿನ ನಡೆಸಿದ ಮುಂಬೈ ಸೆಷನ್ಸ್ ನ್ಯಾಯಾಲಯವು ಬುಧವಾರದವರೆಗೆ ಆದೇಶವನ್ನು ಕಾಯ್ದಿರಿಸಿದೆ. ಹೀಗಾಗಿ 23ರ ವಯಸ್ಸಿನ ಆರ್ಯನ್ ಖಾನ್ ಇನ್ನೂ ಆರು ದಿನ ಜೈಲಿನಲ್ಲಿ ಉಳಿಯಬೇಕಾಗಿದೆ.
ಆರ್ಯನ್ ಖಾನ್ ಮಾದಕದ್ರವ್ಯದ ಖಾಯಂ ಗ್ರಾಹಕನಾಗಿದ್ದ. ಅಂತರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿದ್ದು,ಮಾದಕವಸ್ತು ಕಳ್ಳಸಾಗಣೆ ಹಾಗೂ ಬಳಕೆಯಲ್ಲಿ ತೊಡಗಿರುವುದಾಗಿ ಗುರುವಾರ ಮಧ್ಯಾಹ್ನ ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ವಾದಿಸಿದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಜಾಮೀನು ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
ಕೇಂದ್ರ ಏಜೆನ್ಸಿ ಎನ್ ಸಿಬಿಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ "ಅವರು (ಆರ್ಯನ್ ಖಾನ್) ಕಳೆದ ಕೆಲವು ವರ್ಷಗಳಿಂದ ಡ್ರಗ್ಸ್ ಸೇವಿಸುತ್ತಿದ್ದರು" ಎಂದು ಆನ್-ರೆಕಾರ್ಡ್ ಹೇಳಿಕೆಗಳನ್ನು ಉಲ್ಲೇಖಿಸಿ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಮುಂಬೈ ಕರಾವಳಿಯ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದ್ದ ಎನ್ ಸಿಬಿ ತಂಡ ನಿಷೇಧಿತ ಡ್ರಗ್ಸ್ ಗಳನ್ನು ವಶಕ್ಕೆ ಪಡೆದಿತ್ತು. ಇದಕ್ಕೆ ಸಂಬಂಧಿಸಿ ಅ.3ರಂದು ಆರ್ಯನ್ ಖಾನ್ ಅವರನ್ನು ಬಂಧಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಈ ತನಕ 20 ಜನರನ್ನು ಬಂಧಿಸಲಾಗಿದೆ.