ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿ ಕಟ್ಟಿಹಾಕಲ್ಪಟ್ಟ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ

Update: 2021-10-15 07:05 GMT
Photo: Twitter

ಹೊಸದಿಲ್ಲಿ: ಮಣಿಕಟ್ಟು  ತುಂಡರಿಸಲ್ಪಟ್ಟ ಯುವಕನ  ಮೃತದೇಹವೊಂದು ತಲೆಕೆಳಗಾದ ಸ್ಥಿತಿಯಲ್ಲಿದ್ದ ಪೊಲೀಸ್ ಬ್ಯಾರಿಕೇಡ್ ಒಂದಕ್ಕೆ ಕಟ್ಟಿ ಹಾಕಲ್ಪಟಟ ಸ್ಥಿತಿಯಲ್ಲಿ ರೈತರ ಪ್ರತಿಭಟನಾ ಸ್ಥಳವಾದ ಸಿಂಘು ಗಡಿಯ ಕುಂಡ್ಲಿ, ಸೋನಿಪತ್ ಎಂಬಲ್ಲಿ ಇಂದು ಬೆಳಿಗ್ಗೆ ಸುಮಾರು 5  ಗಂಟೆಗೆ ಕಂಡು ಬಂದಿದೆ. "ಮೃತದೇಹದ ಕೈಕಾಲುಗಳಲ್ಲಿ ಇರಿತದ ಗಾಯಗಳಿದ್ದು ಇದಕ್ಕೆ ಯಾರು ಕಾರಣವೆಂದು ತಿಳಿದು ಬಂದಿಲ್ಲ. ಎಫ್‍ಐಆರ್ ದಾಖಲಾಗಿದೆ. ವೈರಲ್ ವೀಡಿಯೋ ತನಿಖೆಯಾಗಬೇಕಿದೆ" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ಕೊಲೆಗೆ ಸಿಖ್ `ಹೋರಾಟಗಾರರ' ಗುಂಪು ನಿಹಾಂಗ್‍ಗಳು ಕಾರಣ ಎಂದು ಕೆಲ ವರದಿಗಳು ಹೇಳಿವೆ. ನಿಹಾಂಗ್‍ಗಳು ಮಣಿಕಟ್ಟಿಗೆ ಇರಿತದ ಗಾಯವಿದ್ದ ಹಾಗೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಒಬ್ಬ ವ್ಯಕ್ತಿಯ ಮೇಲೆ ನಿಂತಿರುವುದು ಹಾಗೂ ಆತ ತೀವ್ರ ನೋವಿನಿಂದಿರುವುದು ಕಾಣಿಸುವ ಒಂದು ವೀಡಿಯೋ ಹರಿದಾಡುತ್ತಿದೆ. ಆತನನ್ನು ಸುತ್ತುವರಿದ ಕೆಲ ಶಸ್ತ್ರಸಜ್ಜಿತ ಜನರು ಆ ವ್ಯಕ್ತಿಯ ಹೆಸರು ಮತ್ತು ಗ್ರಾಮದ ಕುರಿತು ಮಾಹಿತಿ ಕೇಳುತ್ತಿರುವುದು ಹಾಗೂ ಅಲ್ಲಿರುವ ಯಾರೂ ಆತನಿಗೆ ಸಹಾಯ ಮಾಡಲು ಯತ್ನಿಸದೇ ಇರುವುದು ಕೂಡ ಕಾಣಿಸುತ್ತದೆ.

ಇನ್ನೊಂದು ವೀಡಿಯೋದಲ್ಲಿ ಈ ವ್ಯಕ್ತಿಯನ್ನು ತಲೆಕೆಳಗಾಗಿ ಹಗ್ಗದಲ್ಲಿ ಕಟ್ಟಿ ಹಾಕಲಾಗಿರುವುದು ಹಾಗೂ ಆತನ ಎಡಗೈ ರಕ್ತಸಿಕ್ತವಾಗಿರುವುದು ಕಾಣಿಸುತ್ತದೆ. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್‍ಗೆ ಹಾನಿಗೈದಿದ್ದಕ್ಕಾಗಿ ಆತನಿಗೆ ನಿಹಾಂಗ್‍ಗಳು ಈ ಶಿಕ್ಷೆ ವಿಧಿಸಿ ಆತನನ್ನು ಥಳಿಸಿ ಸಾಯಿಸಿದ್ದಾರೆನ್ನಲಾಗಿದೆ. ರೈತರ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ ಈ ಘಟನೆ ಕುರಿತಂತೆ ಚರ್ಚಿಸಲು ಇಂದು ಸಭೆ ಸೇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News