ದೇಶಕ್ಕೆ 7 ಹೊಸ ರಕ್ಷಣಾ ಕಂಪೆನಿಗಳನ್ನು ಅರ್ಪಿಸಿದ ಪ್ರಧಾನಿ

Update: 2021-10-15 18:28 GMT

ಹೊಸದಿಲ್ಲಿ, ಅ. 15: ದೇಶದ ರಕ್ಷಣಾ ವಲಯಕ್ಕೆ ಸೇರ್ಪಡೆಯಾಗಿರುವ 7 ಹೊಸ ಕಂಪೆನಿಗಳು ದೇಶದ ಬಲಿಷ್ಠತೆಯ ಮೂಲಾಧಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 200 ವರ್ಷಗಳಷ್ಟು ಹಳೆಯ ಆರ್ಡೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ) ಅನ್ನು ವಿಸರ್ಜನೆ ಮಾಡಿದ ಬಳಿಕ ಅದರ ಬದಲಿಗೆ ರೂಪಿಸಲಾದ ಸರಕಾರಿ ಸ್ವಾಮ್ಯದ 7 ಕಂಪೆನಿಗಳನ್ನು ಲೋಕಾರ್ಪಣೆ ಮಾಡಿದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಧ್ವನಿ ಮುದ್ರಿತ ವೀಡಿಯೊದಲ್ಲಿ ಅವರು ಮಾತನಾಡಿದರು. ‌

ಸ್ವಾತಂತ್ರದ ಬಳಿಕ ಭಾರತ ಈ ಫ್ಯಾಕ್ಟರಿಗಳನ್ನು ಮೇಲ್ದರ್ಜೀಕರಣಗೊಳಿಸಬೇಕಿತ್ತು. ಅಲ್ಲದೆ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕಿತ್ತು. ಆದರೆ, ಅದಕ್ಕೆ ಹೆಚ್ಚು ಗಮನ ನೀಡಿಲ್ಲ. ಕಾಲಾಂತರದಲ್ಲಿ ತನ್ನ ವ್ಯೆಹಾತ್ಮಕತೆಗಾಗಿ ಭಾರತ ವಿದೇಶಗಳನ್ನು ಅವಲಂಬಿಸಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿ ಬದಲಾವಣೆ ತರುವಲ್ಲಿ ಈ ನೂತನ 7 ರಕ್ಷಣಾ ಕಂಪೆನಿಗಳು ಅತಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಪ್ರಧಾನಿ ಅವರು ಹೇಳಿದರು. ಸ್ವಾವಲಂಬಿ ಭಾರತ ಅಭಿಯಾನದ ಅಡಿಯಲ್ಲಿ ಭಾರತವನ್ನು ವಿಶ್ವದ ಅತಿ ದೊಡ್ಡ ಸೇನಾ ಶಕ್ತಿಯನ್ನಾಗಿ ರೂಪಿಸುವುದು ಹಾಗೂ ಭಾರತದ ಆಧುನಿಕ ಮಿಲಿಟರಿ ಉದ್ಯಮವನ್ನು ಅಭಿವೃದ್ಧಿಗೊಳಿಸುವುದು ದೇಶದ ಗುರಿಯಾಗಿದೆ ಎಂದು ಅವರು ತಿಳಿಸಿದರು. 

ಭಾರತಕ್ಕೆ ಸ್ವಾತಂತ್ರ ದೊರಕಿ 75 ವರ್ಷ ತುಂಬಿದೆ. ಈ ಸಂದರ್ಭ ದೀರ್ಘ ಕಾಲ ಬಾಕಿ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಇಂದು ದೇಶದ ರಕ್ಷಣಾ ವಲಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಪಾರದರ್ಶಕತೆ, ವಿಶ್ವಾಸ ಹಾಗೂ ತಂತ್ರಜ್ಞಾನ ಇದೆ. ರಕ್ಷಣಾ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗುತ್ತಿದೆ. ನಿಶ್ಚಲವಾದ ನೀತಿಗಳಿಗೆ ಬದಲು ಏಕ ಗವಾಕ್ಷಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು. ಲೋಕಾರ್ಪಣೆಗೊಳಿಸಲಾದ 7 ಕಂಪೆನಿಗಳೆಂದರೆ, ಮ್ಯುನೀಶನ್ಸ್ ಇಂಡಿಯಾ ಲಿಮಿಟೆಡ್, ಆರ್ಮರ್ಡ್ ವೆಹಿಕಲ್ಸ್ ನಿಗಮ್ ಲಿಮಿಟೆಡ್, ಅಡ್ವಾನ್ಸ್ಡ್ ವೆಪನ್ಸ್ ಆ್ಯಂಡ್ ಇಕ್ವಿಪ್ಮೆಂಟ್ ಇಂಡಿಯಾ ಲಿಮಿಟೆಡ್, ಟ್ರೂಪ್ ಕಂಫರ್ಟ್ ಲಿಮಿಟೆಡ್, ಯಾತ್ರಾ ಇಂಡಿಯಾ ಲಿಮಿಟೆಡ್(ಐಒಎಲ್), ಇಂಡಿಯಾ ಆಪ್ಟೆಲ್ ಲಿಮಿಟೆಡ್ ಹಾಗೂ ಗ್ಲೈಡರ್ಸ್ ಇಂಡಿಯಾ ಲಿಮಿಟೆಡ್ (ಜಿಐಎಲ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News