'ನಾನು ಪೂರ್ಣಾವಧಿ ಅಧ್ಯಕ್ಷೆಯಾಗಿದ್ದೇನೆ': ಜಿ -23 ನಾಯಕರನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಹೇಳಿಕೆ

Update: 2021-10-16 06:56 GMT

 ಹೊಸದಿಲ್ಲಿ: ಕೊರೋನ ಕಾರಣದಿಂದ ನಡೆಯದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ(ಸಿಡಬ್ಲ್ಯೂಸಿ)ಸಭೆ ಒಂದೂವರೆ ವರ್ಷಗಳ ಬಳಿಕ ಶನಿವಾರ ನಡೆದಿದೆ.

"ನಾನು "ಪೂರ್ಣಾವಧಿ  ಕಾಂಗ್ರೆಸ್ ಅಧ್ಯಕ್ಷೆ ಆಗಿದ್ಧೇನೆ'' ಎಂದು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪಕ್ಷವನ್ನು ಟೀಕಿಸುತ್ತಿರುವವರು, ನಿರ್ದಿಷ್ಟವಾಗಿ 'ಜಿ -23' ನಾಯಕರನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಅವರು ತಮ್ಮ ಸ್ಥಾನವನ್ನು ಶನಿವಾರ ಒತ್ತಿ ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ "ಏಕತೆ" ಅಥವಾ ಅದರ ಕೊರತೆಯ ಬಗ್ಗೆ ಮಾತನಾಡಿದ ಸೋನಿಯಾ ಅವರು "ಇಡೀ ಸಂಘಟನೆಯು ಕಾಂಗ್ರೆಸ್‌ನ ಪುನರುಜ್ಜೀವನವನ್ನು ಬಯಸುತ್ತದೆ. ಆದರೆ ಇದಕ್ಕೆ ಒಗ್ಗಟ್ಟು ಮತ್ತು ಪಕ್ಷದ ಹಿತಾಸಕ್ತಿಗಳನ್ನು ಪ್ರಮುಖವಾಗಿರಿಸಿಕೊಳ್ಳುವುದು ಅಗತ್ಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಇದಕ್ಕೆ ಸ್ವಯಂ ನಿಯಂತ್ರಣ ಮತ್ತು ಶಿಸ್ತಿನ ಅಗತ್ಯವಿದೆ’’ ಎಂದರು.

"ವಿಧಾನಸಭಾ ಚುನಾವಣೆಗೆ ನಮ್ಮ ಸಿದ್ಧತೆಗಳು ಸ್ವಲ್ಪ ಸಮಯದ ಹಿಂದೆಯೇ ಆರಂಭವಾಗಿದ್ದವು. ನಿಸ್ಸಂದೇಹವಾಗಿ, ನಾವು ಅನೇಕ ಸವಾಲುಗಳನ್ನು ಎದುರಿಸುತ್ತೇವೆ. ಆದರೆ ನಾವು ಒಗ್ಗಟ್ಟಾಗಿದ್ದರೆ,  ಶಿಸ್ತುಬದ್ಧವಾಗಿದ್ದರೆ ಹಾಗೂ   ಪಕ್ಷದ ಹಿತಾಸಕ್ತಿಗಳ ಮೇಲೆ ಮಾತ್ರ ಗಮನ ಹರಿಸಿದರೆ, ನಾವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬ ವಿಶ್ವಾಸವಿದೆ. ಪೂರ್ಣಕಾಲಿಕ ಕಾಂಗ್ರೆಸ್ ಅಧ್ಯಕ್ಷರನ್ನು ಆಯ್ಕೆ ಮಾಡಲು ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸಾಂಸ್ಥಿಕ ಚುನಾವಣೆ ನಡೆಯಲಿದೆ'' ಎಂದು ಸೋನಿಯಾ ಗಾಂಧಿ ಹೇಳಿದರು.

2 ವರ್ಷಗಳ ಹಿಂದೆ ರಾಹುಲ್ ಗಾಂಧಿ ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರಾಗಿರುವ ಸೋನಿಯಾ ಗಾಂಧಿ  "ನಾನು ಯಾವಾಗಲೂ ಮನಬಿಚ್ಚಿ ಮಾತನಾಡುವುದನ್ನು ಮೆಚ್ಚಿದ್ದೇನೆ. ಮಾಧ್ಯಮದ ಮೂಲಕ ನನ್ನೊಂದಿಗೆ ಮಾತನಾಡುವ ಅಗತ್ಯವಿಲ್ಲ" ಎಂದು ಜಿ-23 ನಾಯಕರನ್ನು ಉಲ್ಲೇಖಿಸಿ ಸೋನಿಯಾ ಹೇಳಿದರು.

"ಕಳೆದ ಎರಡು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ನಮ್ಮ ಸಹೋದ್ಯೋಗಿಗಳು ವಿಶೇಷವಾಗಿ ಕಿರಿಯರು ಪಕ್ಷದ ನೀತಿಗಳು ಹಾಗೂ  ಕಾರ್ಯಕ್ರಮಗಳನ್ನು ಜನರ ಬಳಿಗೆ ಕೊಂಡೊಯ್ಯುವಲ್ಲಿ ನಾಯಕತ್ವದ ಪಾತ್ರಗಳನ್ನು ವಹಿಸಿದ್ದಾರೆ .  ಇದು ರೈತರ ಪ್ರತಿಭಟನೆ ಇರಬಹುದು, ಕೊರೋನ ಸಾಂಕ್ರಾಮಿಕ ಸಮಯದಲ್ಲಿ ಪರಿಹಾರ ಒದಗಿಸುವುದು, ಯುವಕರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಎತ್ತಿ ತೋರಿಸುವುದು, ದಲಿತರು, ಆದಿವಾಸಿಗಳು ಹಾಗೂ  ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳು, ಬೆಲೆ ಏರಿಕೆ ಹಾಗೂ  ಸಾರ್ವಜನಿಕ ವಲಯದ ನಾಶದ ವಿರುದ್ಧ ಯುವಕರು ನಾಯಕತ್ವ ವಹಿಸಿ ಧ್ವನಿ ಎತ್ತಿದ್ದರು" ಎಂದು ಕಾಂಗ್ರೆಸ್ ಅಧ್ಯಕ್ಷರು ತಮ್ಮ ಆರಂಭಿಕ ಭಾಷಣದಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News