31ನೇ ಸಂಸ್ಥಾಪನಾ ದಿನಾಚರಣೆ; ಕೊಂಕಣ ರೈಲ್ವೆಯಿಂದ ಸುರತ್ಕಲ್-ಅಂಕೋಲ ನಡುವೆ ರೋರೋ ಸೇವೆ

Update: 2021-10-16 15:38 GMT

ಉಡುಪಿ, ಅ.16: ದೇಶದ ಸೇವೆಗೆ ಸಮರ್ಪಣೆಗೊಂಡು 31 ವರ್ಷಗಳಾದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಇಂದು ತನ್ನ 31ನೇ ಸಂಸ್ಥಾಪನಾ ದಿನಾಚರಣೆ ಯನ್ನು ಕೋವಿಡ್-19ರ ಹಿನ್ನೆಲೆಯಲ್ಲಿ ವರ್ಚುವಲ್ ಮಾದರಿಯಲ್ಲಿ ಆಚರಿಸಿತು.

ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ದೇಶಾದ್ಯಂತ ಲಾಕ್‌ ಡೌನ್ ಹೇರಿದ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಲ್ಲಿ ಎಲ್ಲಾ ರೈಲ್ವೆ ಸೇವೆಗಳನ್ನು ರದ್ದುಪಡಿಸಿದ್ದು, ಕೊಂಕಣ ರೈಲ್ವೆ ಮಾರ್ಗದಲ್ಲೂ ಎಲ್ಲಾ ರೈಲುಗಳ ಸಂಚಾರವನ್ನು ಹಿಂದೆಗೆದುಕೊಳ್ಳಲಾಗಿತ್ತು. ಸದ್ಯ ಹಂತಹಂತವಾಗಿ ರೈಲು ಸೇವೆಯನ್ನು ಪುನರಾರಂಭಿಸಲಾಗುತ್ತಿದೆ.

ಸದ್ಯ ಕೊಂಕಣ ರೈಲ್ವೆ ಮಾರ್ಗದಲ್ಲಿ 42 ಜೋಡಿ ಮೈಲ್/ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಐದು ಜೋಡಿ ಪ್ಯಾಸೆಂಜರ್ ರೈಲುಗಳು ಸಂಚರಿಸುತ್ತಿವೆ. ಈ ವರ್ಷದ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಜನರ ಅನುಕೂಲಕ್ಕಾಗಿ ಒಟ್ಟು 256 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಾಗಿತ್ತು.

ಮಂಗಳೂರಿನಿಂದ ಕಲ್ಲಿದ್ದಲು ಸಾಗಾಟ: ಇದೀಗ ಕೊಂಕಣ ರೈಲ್ವೆ ಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಾಟವನ್ನು ಪ್ರಾರಂಭಿಸಿದೆ. ಅಲ್ಲದೇ ಬಲ್ಲಿ ಕಂಟೈನರ್ ಡಿಪೋದಿಂದ ರಫ್ತಾಗುವ ಕಂಟೈನರ್ ಸಾಗಾಟವನ್ನು ಪ್ರಾರಂಭಿಸಿದೆ ಎಂದು ಕೊಂಕಣ ರೈಲ್ವೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಇದರೊಂದಿಗೆ ಹೊಸದಾಗಿ ಅಂಕೋಲ ಮತ್ತು ಸುರತ್ಕಲ್ ನಡುವೆ ರೋ-ರೋ ಸೇವೆ (ರೋಲ್ ಆನ್-ರೋಲ್ ಆಫ್)ಯನ್ನು ಸಹ ಪ್ರಾರಂಭಿಸಿದ್ದು, ಇದರಿಂದ ಕೊಂಕಣ ರೈಲ್ವೆ ಕಾರ್ಪೋರೇಷನ್‌ನ ಆದಾಯ ವೃದ್ಧಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.

ಕಳೆದ ವರ್ಷದ ಕೊಂಕಣ ರೈಲ್ವೆಯ ಸಾಧನೆಗಳಲ್ಲಿ ಎಂಟು ಹೊಸ ಕ್ರಾಸಿಂಗ್ ಸ್ಟೇಶನ್ ಹಾಗೂ ಎಂಟು ಲೂಪ್‌ಲೈನ್‌ಗಳ ಕಾಮಗಾರಿ ಮುಕ್ತಾಯಗೊಂಡಿವೆ. ರೋಹಾ ಮತ್ತು ವೀರ್ ಸೆಕ್ಷನ್‌ಗಳಲ್ಲಿ ರೈಲುಹಳಿ ದ್ವಿಪಥ ಕಾಮಗಾರಿ ಸಹ ಸಂಪೂರ್ಣಗೊಂಡಿದೆ.

ವಿದ್ಯುದ್ದೀಕರಣ ಡಿಸೆಂಬರ್‌ಗೆ ಮುಕ್ತಾಯ: ಕೊಂಕಣ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕೆಲಸ ಮುಕ್ತಾಯದ ಕೊನೆಯ ಹಂತದಲ್ಲಿದ್ದು, 2021ರ ಡಿಸೆಂಬರ್ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. ಮಡಗಾಂವ್ ಹಾಗೂ ಮಿಜೋರ್ಡಾ ವಿಭಾಗಗಳ ನಡುವಿನ ಅಟೋಮ್ಯಾಟಿಕ್ ಬ್ಲಾಕ್ ಸಿಗ್ನಲಿಂಗ್ ಸಹ ಪ್ರಾರಂಭಗೊಂಡಿದೆ.

ಕೊಂಕಣ ರೈಲ್ವೆಯ ತಂತ್ರಜ್ಞಾನದ ಸಾಧನೆಯ ದ್ಯೋತಕವಾಗಿ ಈ ವರ್ಷ ಯುಎಸ್‌ಬಿಆರ್‌ಎಲ್ ಯೋಜನೆಯಡಿ ಚೀನಾಬ್ ಸೇತುವೆಯ ಕಮಾನುಗಳ ಕಾಮಗಾರಿ ಮುಕ್ತಾಯಗೊಂಡಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ. ಚೀನಾಬ್ ಸೇತುವೆಯು ನೆಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣ ಗೊಂಡಿದೆ. ಬೃಹತ್ ಚೀನಾಬ್ ನದಿ 1315ಮೀ. ಉದ್ದವಿದ್ದು 17 ಸ್ಪಾನ್‌ಗಳನ್ನು ಒಳಗೊಂಡಿದೆ.

ನೇಪಾಲದಿಂದ ಆಹ್ವಾನ:   ಕೊಂಕಣ ರೈಲ್ವೆಯ ಸಾಧನೆಯ ಕಿರೀಟಕ್ಕೆ ಗರಿ ಇಟ್ಟಂತೆ ಇದೀಗ ನೇಪಾಲ ರೈಲ್ವೇಸ್ ನೇಪಾಲದಲ್ಲಿ ಜಯನಗರ-ಕುರ್ಥಾದಲ್ಲಿ ರೈಲ್ವೆ ಸೇವೆ ಪ್ರಾರಂಭದ ಜವಾಬ್ದಾರಿಯನ್ನು ಕೊಂಕಣ ರೈಲ್ವೆಗೆ ನೀಡಿದೆ. ಇದು ಕೊಂಕಣ ರೈಲ್ವೆ ಪಡೆದ ಪ್ರಥಮ ವಾಣಿಜ್ಯ ಯೋಜನೆ ಹಾಗೂ ಅಂತಾರಾಷ್ಟ್ರೀಯ ಕಾಮಗಾರಿಯಾಗಿದೆ ಎಂದು ಹೇಳಿಕೆ ತಿಳಿಸಿದೆ.

ಕೋವಿಡ್‌ನಿಂದ ಮೃತಪಟ್ಟ ಕೊಂಕಣ ರೈಲ್ವೆ ಉದ್ಯೋಗಿಗಳಿಗೆ ಶೀಘ್ರದಲ್ಲೇ ಗರಿಷ್ಠ ಪರಿಹಾರ ನೀಡಲಾಗಿದೆ. ಇದುವರೆಗೆ ಕೊಂಕಣ ರೈಲ್ವೆಯ ಶೇ.90ರಷ್ಟು ಉದ್ಯೋಗಿಗಳು ಪ್ರಥಮ ಡೋಸ್ ಕೋವಿಡ್ ಲಸಿಕೆ ಹಾಗೂ ಶೇ.70ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.

ಈ ವರ್ಷದ ಜುಲೈ 21ರಂದು ಸುರಿದ ಭಾರೀ ಮಳೆಯಿಂದ ಚಿಫ್ಲುಣ್ ನಿಲ್ದಾಣದಲ್ಲಿ ನೆರೆಯಿಂದ ಅವಘಡ ಸಂಭವಿಸಿದ್ದು, ಇದನ್ನು ರೈಲ್ವೆ ಯಶಸ್ವಿಯಾಗಿ ನಿಭಾಯಿಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು, ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕೊಂಕಣ ರೈಲ್ವೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News