ಜಮ್ಮು-ಕಾಶ್ಮೀರ: ಸಲ್ಮಾನ್ ಶಾ, ಸುಹೇಲ್ ದಾರ್ ಬಿಡುಗಡೆಗೆ ಪತ್ರಕರ್ತರ ರಕ್ಷಣಾ ಸಮಿತಿಯ ಆಗ್ರಹ

Update: 2021-10-16 17:54 GMT

ಶ್ರೀನಗರ,ಅ.16: ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಬಂಧಿತ ಪತ್ರಕರ್ತರನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಮೆರಿಕದ ಎನ್ಜಿಒ ಪತ್ರಕರ್ತರ ರಕ್ಷಣಾ ಸಮಿತಿಯು ಆಗ್ರಹಿಸಿದೆ.

ಪತ್ರಕರ್ತರನ್ನು ಪ್ರಶ್ನಿಸುವುದನ್ನು ನಿಲ್ಲಿಸುವಂತೆಯೂ ಜಮ್ಮು-ಕಾಶ್ಮೀರದ ಆಡಳಿತವನ್ನು ಆಗ್ರಹಿಸಿರುವ ಸಮಿತಿಯು,ಬದಲಿಗೆ ಮಾಧ್ಯಮಗಳು ಮುಕ್ತವಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ಕೇಳಿಕೊಂಡಿದೆ. ಪೊಲೀಸರು ಅ.8ರಿಂದ ನಾಲ್ವರು ಪತ್ರಕರ್ತರನ್ನು ವಶಕ್ಕೆ ತೆಗೆದುಕೊಂಡಿದ್ದು,ಈ ಪೈಕಿ ಇಬ್ಬರನ್ನು ಬಿಡುಗಡೆಗೊಳಿಸಲಾಗಿದೆ ಮತ್ತು ಇನ್ನೋರ್ವನಿಗೆ ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ ಎಂದು ಸಮಿತಿಯು ಹೇಳಿದೆ.

ಆನ್ಲೈನ್ ಸಾಪ್ತಾಹಿಕ ಮ್ಯಾಗಝಿನ್ ಕಾಶ್ಮೀರ್ ಫಸ್ಟ್ ನ ಸಂಪಾದಕ ಸಲ್ಮಾನ್ ಶಾ ಮತ್ತು ಫ್ರೀಲಾನ್ಸ್ ಪತ್ರಕರ್ತ ಸುಹೇಲ್ ದಾರ್ ಅವರನ್ನು ಗುರುವಾರ ಅನಂತನಾಗ್ ಜಿಲ್ಲೆಯ ಜೈಲಿಗೆ ಸ್ಥಳಾಂತರಿಸಲಾಗಿದೆ. ಫೋಟೊಜರ್ನಲಿಸ್ಟ್ ಮುಖ್ತಾರ್ ಝಹೂರ್ ಮತ್ತು ಫ್ರೀಲಾನ್ಸ್ ಪತ್ರಕರ್ತ ಮಜೀದ್ ಹೈದರಿ ಅವರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆ ಮಾಡಲಾಗಿದೆ. ಇನ್ನೋರ್ವ ಫ್ರೀಲಾನ್ಸ್ ಪತ್ರಕರ್ತ ಸಜಾದ್ ಗುಲ್ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.

ಭಾರತವು ತನ್ನ ಒಂದು ಕಾಲದ ಹೆಮ್ಮೆಯ ಪತ್ರಿಕಾ ಸ್ವಾತಂತ್ರದ ಸಂಪ್ರದಾಯವನ್ನು ಸಂಪೂರ್ಣವಾಗಿ ತೊರೆದು ಜಮ್ಮು-ಕಾಶ್ಮೀರದ ಪ್ರಮುಖ ಪತ್ರಕರ್ತರಿಗೆ ಕಿರುಕುಳ ನೀಡುವ ಮತ್ತು ವಶಕ್ಕೆ ತೆಗೆದುಕೊಳ್ಳುವ ತನ್ನ ಲಜ್ಜೆಗೇಡಿ ದಾಖಲೆಯನ್ನು ಸುಧಾರಿಸಲು ತ್ವರಿತ ಕ್ರಮವನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿಯ ಏಷ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀವನ್ ಬಟ್ಲರ್ ಹೇಳಿದ್ದಾರೆ.

ಅನಂತನಾಗ್ ನ ಬಟೆಂಗೂ ಪ್ರದೇಶದ ನಿವಾಸಿ ದಾರ್ ಅವರನ್ನು ಅ.8ರಂದು ವಿಚಾರಣೆಗಾಗಿ ಶೇರ್ಬಾಗ್ ಪೊಲೀಸ್ ಠಾಣೆಗೆ ಕರೆಸಲಾಗಿತ್ತು ಮತ್ತು ಬಳಿಕ ವಶಕ್ಕೆ ತೆಗೆದುಕೊಳ್ಳಲಾಗಿತ್ತು .ಅವರನ್ನು ಸಂಜೆ ಬಿಡುಗಡೆ ಮಾಡಲಾಗುವುದು ಎಂದು ಠಾಣಾಧಿಕಾರಿ ಮಜೀದ್ ನದೀಂ ಬುಧವಾರ ತಿಳಿಸಿದ್ದರು. ಅದರೆ ಮರುದಿನವೇ ಅವರನ್ನು ಜೈಲಿಗೆ ರವಾನಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News