ಕೇರಳ ನೆರೆ ಮತ್ತು ಭೂಕುಸಿತ ಅನಾಹುತ :ಸತ್ತವರ ಸಂಖ್ಯೆ 27ಕ್ಕೇರಿಕೆ,

Update: 2021-10-18 16:25 GMT
Photo: Thenewsminute

ತಿರುವನಂತಪುರ,ಅ.18: ಕೊಟ್ಟಾಯಂ ಜಿಲ್ಲೆಯ ಕೂತ್ತಿಕಲ್ ಮತ್ತು ನೆರೆಯ ಇಡುಕ್ಕಿ ಜಿಲ್ಲೆಯ ಕೊಕ್ಕಾಯರ್ನಲ್ಲಿ ಅವಶೇಷಗಳಡಿ ಸೋಮವಾರ ಇನ್ನಷ್ಟು ಶವಗಳು ಪತ್ತೆಯಾಗಿದ್ದು,ಕೇರಳದಲ್ಲಿ ಭಾರೀ ನೆರೆ ಮತ್ತು ಭೂಕುಸಿತಗಳಲ್ಲಿ ಸತ್ತವರ ಸಂಖ್ಯೆ 27ಕ್ಕೇರಿದೆ. 
ಬುಧವಾರದಿಂದ ಮಳೆ ಮತ್ತೆ ಸುರಿಯುವ ನಿರೀಕ್ಷೆಯಿದೆ ಎಂದು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು,ಅಂದು 14 ಜಿಲ್ಲೆಗಳ ಪೈಕಿ 11ರಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.


ಸರಕಾರದ ಅಂಕಿಅಂಶಗಳಂತೆ ಭೂಕುಸಿತ ಸಂಭವಿಸಿದ್ದ ಕೂತ್ತಿಕಲ್ ಪಂಚಾಯತ್ ವ್ಯಾಪ್ತಿಯ ಪ್ಲಾಪಳ್ಳಿಯಲ್ಲಿ 13 ಶವಗಳು ಮತ್ತು ಕೊಕ್ಕಾಯರ್ನಲ್ಲಿ ಒಂಭತ್ತು ಶವಗಳು ಪತ್ತೆಯಾಗಿವೆ. ಸೋಮವಾರ ನಸುಕಿನಲ್ಲಿ ಮಳೆ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆಗಳು ಪುನರಾರಂಭಗೊಂಡಿದ್ದು,ಕೊನೆಯದಾಗಿ ಏಳರ ಹರೆಯದ ಸಚ್ಚು ಶಾಹುಲ್ ಎಂಬ ಬಾಲಕನ ಮೃತದೇಹ ಪತ್ತೆಯಾಗಿತ್ತು. ನಾಪತ್ತೆಯಾಗಿರುವ ಆ್ಯನ್ಸಿ ಎಂಬ ಮಹಿಳೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕೋಝಿಕ್ಕೋಡ,ತ್ರಿಶೂರು ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ನೆರೆ ನೀರಿನಲ್ಲಿ ಮಳುಗಿ ಜನರು ಸಾವನ್ನಪ್ಪಿದ್ದಾರೆ. ಶನಿವಾರ ಇಡುಕ್ಕಿ ಜಿಲ್ಲೆಯ ಕಾಂಜಾರ್ ಪ್ರದೇಶದಲ್ಲಿ ಕಾರೊಂದು ನೆರೆನೀರಿನಲ್ಲಿ ಕೊಚ್ಚಿಹೋಗಿದ್ದು,ಅದರಲ್ಲಿದ್ದ ಇಬ್ಬರು ಮೃತಪಟ್ಟಿದ್ದರು. ಸೋಮವಾರ ಬೆಳಿಗ್ಗೆ ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ 2396.86 ಅಡಿಗೆ ಏರಿದ್ದು,ರೆಡ್ ಅಲರ್ಟ್ ಘೋಷಿಸಲಾಗಿದೆ. ಜಲಾಶಯದ ಪೂರ್ಣ ಮಟ್ಟ 2403 ಅಡಿಗಳಾಗಿವೆ.

ಮಂಗಳವಾರ ನೀರಿನ ಮಟ್ಟ 2398.86 ಅಡಿಗೆ ಏರುವ ಸಾಧ್ಯತೆಯಿದೆ ಎಂದು ಜಲಾಶಯವನ್ನು ನಿರ್ವಹಿಸುತ್ತಿರುವ ಮತ್ತು ಅಲ್ಲಿ ವಿದ್ಯುತ್ತನ್ನು ಉತ್ಪಾದಿಸುತ್ತಿರುವ ಕೇರಳ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯು ನೀಡಿರುವ ಮಾಹಿತಿಯನ್ನು ಎರ್ನಾಕುಳಂ ಜಿಲ್ಲಾಧಿಕಾರಿ ಜಾಫರ್ ಮಲ್ಲಿಕ್ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯಮಟ್ಟದ ತಜ್ಞರ ಸಮಿತಿಯು ನೀರಿನ ಮಟ್ಟಗಳನ್ನು ಪರಿಶೀಲಿಸಲಿದೆ ಮತ್ತು ಎರ್ನಾಕುಳಂ ಹಾಗೂ ಇಡುಕ್ಕಿ ಜಿಲ್ಲಾಡಳಿತಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಿದೆ. ಹೆಚ್ಚುವರಿ ನೀರನ್ನು ಹೊರಹಾಕಲು ಮಂಗಳವಾರ ಜಲಾಶಯದ ದ್ವಾರಗಳನ್ನು ತೆರೆಯುವುದು ಅಗತ್ಯವಾದರೆ ಸಮಯ ಮತ್ತು ಬಿಡುಗಡೆಗೊಳಿಸಲಾಗುವ ನೀರಿನ ಪ್ರಮಾಣದ ಕುರಿತು ನದಿ ಸಮೀಪದ ನಿವಾಸಿಗಳಿಗೆ ಪೂರ್ವ ಮಾಹಿತಿಗಳನ್ನು ನೀಡಲಾಗುವುದು. ಜಲಾಶಯದ ದ್ವಾರಗಳನ್ನು ತೆರೆಯುವುದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು ತಾಲೂಕು ಮಟ್ಟಗಳಲ್ಲಿ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದೂ ಮಲ್ಲಿಕ್ ತಿಳಿಸಿದ್ದಾರೆ.

ಪಟ್ಟಣಂತಿಟ್ಟ ಜಿಲ್ಲೆಯ ಕಕ್ಕಿ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದರಿಂದ ನೀರಿನ ಮಟ್ಟ 983.5 ಅಡಿಯನ್ನು ತಲುಪಿದ ಹಿನ್ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಜಲಾಶಯದ ದ್ವಾರಗಳನ್ನು ತೆರೆಯಲಾಗಿದೆ. ಜಲಾಶಯದ ಗರಿಷ್ಠ ಮಟ್ಟ 986.33 ಅಡಿಗಳಾಗಿವೆ.

ಸೋಮವಾರ ತಿರುವನಂತಪುರದಲ್ಲಿ ಮುಖ್ಯಮಂತ್ರಿಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯು ರಾಜ್ಯಾದ್ಯಂತ ಜಲಾಶಯಗಳಲ್ಲಿ ಹೆಚ್ಚುತ್ತಿರುವ ನೀರಿನ ಮಟ್ಟ ಮತ್ತು ನೆರೆ ಹಾಗೂ ಭೂಕುಸಿತಗಳಿಂದ ಸಂಭವಿಸಿರುವ ಹಾನಿಯ ಬಗ್ಗೆ ಪುನರ್ಪರಿಶೀಲಿಸಿದೆ.

ಕೋವಿಡ್ ಲಾಕ್ಡೌನ್ ಬಳಿಕ ಶಾಲಾ-ಕಾಲೇಜುಗಳ ಪುನರಾರಂಭವನ್ನು ಈಗ ಅ.25ಕ್ಕೆ ಮುಂದೂಡಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News