ರೈತರ ಬೇಡಿಕೆ ಈಡೇರಿಸದೇ ಇದ್ದರೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಾರದು: ಮೇಘಾಲಯ ರಾಜ್ಯಪಾಲ

Update: 2021-10-18 10:30 GMT

ಜೈಪುರ್: "ಪ್ರತಿಭಟನಾನಿರತ ರೈತರ ಬೇಡಿಕೆಗಳನ್ನು ಈಡೇರಿಸದೇ ಇದ್ದರೆ ಈ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲ" ಎಂದು ಹೇಳಿರುವ ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್, ರೈತರ ಬೇಡಿಕೆಗಳನ್ನು ಈಡೇರಿಸಿ ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ರಾಜಸ್ಥಾನದ ಝುನ್‍ಝುನು ಜಿಲ್ಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು.

ತಾವು ರೈತರಿಗೆ ಬೆಂಬಲ ನೀಡುವುದಾಗಿ ಹೇಳಿದ ಅವರು ಅದಕ್ಕಾಗಿ ತಮ್ಮ ಈಗಿನ ಹುದ್ದೆಯನ್ನು ತ್ಯಜಿಸಬೇಕಾಗಿಲ್ಲ ಆದರೆ ಅಗತ್ಯವಿದ್ದರೆ ಹಾಗೆ ಮಾಡಲು ಸಿದ್ಧ ಎಂದು ತಿಳಿಸಿದರು.

ರೈತರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ತಾವು ಹಲವರು ಜತೆಗೆ ಹೋರಾಡಬೇಕಾಯಿತು ಎಂದು ಮಲಿಕ್ ಹೇಳಿದರು. "ಅವರಿಗಾಗಿ ನಾನು ಪ್ರಧಾನಿ, ಗೃಹ ಸಚಿವ, ಎಲ್ಲರ ಜತೆಗೂ ಜಗಳವಾಡಿದ್ದೇನೆ. ನೀವು ತಪ್ಪು ಮಾಡುತ್ತಿದ್ದೀರಿ, ಹೀಗೆ ಮಾಡಬೇಡಿ ಎಂದು ಹೇಳಿದ್ದೇನೆ" ಎಂದು ಮಲಿಕ್ ಹೇಳಿದರು.

"ಎಂಎಸ್‍ಪಿ ಕುರಿತಂತೆ  ಕಾನೂನಿನಡಿಯಲ್ಲಿ ಸರಕಾರ ಖಾತ್ರಿ ಪಡಿಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಸುಪ್ರೀಂ ಕೋರ್ಟ್ ಮೂರು ಕಾನೂನುಗಳ ಜಾರಿಗೆ ತಡೆಹಿಡಿದಿರುವುದರಿಂದ ರೈತರು ಈ ವಿಚಾರ ಕೈಬಿಡಬಹುದು. ಆದರೆ ಒಂದೇ ವಿಷಯವಿದೆ. ಅದನ್ನೂ ಅವರು ಮಾಡುತ್ತಿಲ್ಲ, ಏಕೆಂದರೆ ಎಂಎಸ್‍ಪಿ ಇಲ್ಲದೆ ಏನೂ ಆಗುವುದಿಲ್ಲ" ಎಂದು ಮಲಿಕ್ ಹೇಳಿದರು.

ಪ್ರಧಾನಿಗೆ  ಸಾರ್ವಜನಿಕವಾಗಿ ಏನೂ ಸಂದೇಶ ನೀಡುವುದಿಲ್ಲ, ಖಾಸಗಿಯಾಗಿ ಹಾಗೆ ಮಾಡುವುದಾಗಿ ಎಂದು ಅವರು ಹೇಳಿದರು.

"ಸರ್ಕಾರ ಬಯಸಿದರೆ ರೈತರು ಹಾಗೂ ಕೇಂದ್ರದ  ನಡುವೆ ಸಂಧಾನ ನಡೆಸಲು ಸಿದ್ಧ, ನೀವು ಎಂಎಸ್‍ಪಿ ಕುರಿತು ಖಾತ್ರಿ ಒದಗಿಸಿ. ನಾನು ರೈತರ ಮನವೊಲಿಸುತ್ತೇನೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News