ಮೋದಿ ಭಾರತೀಯ ಪಾಸ್ಪೋರ್ಟ್ ನ ಮೌಲ್ಯವನ್ನು ಹೆಚ್ಚಿಸಿದ್ದಾರೆ ಎಂಬ ಅಮಿತ್ ಶಾ ಹೇಳಿಕೆಯಲ್ಲಿ ಹುರುಳಿಲ್ಲ

Update: 2021-10-18 18:23 GMT

ಹೊಸದಿಲ್ಲಿ,18: ನಾಲ್ಕು ದಿನಗಳ ಹಿಂದೆ ಗೋವಾದ ತಾಲಿಗಾಂವ್ನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಪ್ರಧಾನಿ ನರೇಂದ್ರ ಮೋದಿಯವರು ವಿದೇಶಗಳಲ್ಲಿ ಭಾರತೀಯ ಪಾಸ್ಪೋರ್ಟ್ನ ಮೌಲ್ಯವನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದ್ದರು. ಈಗ ಭಾರತೀಯ ಪಾಸ್ಪೋರ್ಟ್ ಅನ್ನು ನೋಡಿದ ಬಳಿಕ ವಿದೇಶಗಳ ಅಧಿಕಾರಿಗಳು ಮುಗುಳ್ನಗುತ್ತ ‘ನೀವು ಮೋದಿ ದೇಶದಿಂದ ಬಂದಿದ್ದೀರಿ’ಎಂದು ಹೇಳುತ್ತಾರೆ. ಮೋದಿ ಭಾರತೀಯ ಪಾಸ್ಪೋರ್ಟ್ ನ ಮೌಲ್ಯವನ್ನು ಹೆಚ್ಚಿಸಿದ್ದಾರೆ ಮತ್ತು ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಬಹುಮತದ ಗೆಲುವನ್ನು ಸಾಧಿಸಿದ್ದರಿಂದ ಇದು ಸಾಧ್ಯವಾಗಿದೆ ಎಂದೂ ಶಾ ಹೇಳಿದ್ದರು.

ಶಾ ಈ ಹೇಳಿಕೆಯನ್ನು ನೀಡುವ ಮುನ್ನ ಭಾರತೀಯ ಪಾಸ್ಪೋರ್ಟ್ ನ ಜಾಗತಿಕ ರ್ಯಾಂಕಿಂಗ್ ಏನು ಎನ್ನುವುದನ್ನು ತಿಳಿದುಕೊಳ್ಳುವ ಗೋಜಿಗೆ ಖಂಡಿತ ಹೋಗಿರಲಿಲ್ಲ. ಶಾ ಹೇಳಿಕೆಯ ಋಜುತ್ವದ ಬಗ್ಗೆ ವಿಶ್ಲೇಷಿಸಿದ್ದು,ಅದರ ವರದಿಯನ್ನು ಸುದ್ದಿಜಾಲತಾಣ Scroll.in FactChecker  ಪ್ರಕಟಿಸಿದೆ.

ಲಂಡನ್ ನ ಹೆನ್ಲಿ ಆ್ಯಂಡ್ ಪಾರ್ಟನರ್ಸ್ ಸಿದ್ಧಪಡಿಸಿರುವ ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ 2021 ಮತ್ತು ಆರ್ಟನ್ ಕ್ಯಾಪಿಟಲ್ ನ ಪಾಸ್ಪೋರ್ಟ್ ಇಂಡೆಕ್ಸ್ ಶಾ ಹೇಳಿಕೆ ಸಂಪೂರ್ಣ ಸುಳ್ಳು ಎನ್ನುವುದನ್ನು ಬೆಟ್ಟು ಮಾಡುತ್ತಿವೆ.

ಅ.5ರಂದು ಬಿಡುಗಡೆಗೊಂಡಿರುವ ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ 2021ರಂತೆ 2020ರಲ್ಲಿ ಜಾಗತಿಕ ಪಾಸ್ಪೋರ್ಟ್ ರ್ಯಾಂಕಿಂಗ್ನಲ್ಲಿ 82ನೇ ಸ್ಥಾನದಲ್ಲಿದ್ದ ಭಾರತ 2021ರಲ್ಲಿ 90ನೇ ಸ್ಥಾನಕ್ಕೆ ಕುಸಿದಿದೆ. ಭಾರತೀಯ ಪಾಸಪೋರ್ಟ್ 58 ಅಂಕಗಳನ್ನು ಗಳಿಸಿದೆ,ಅಂದರೆ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು 58 ದೇಶಗಳಿಗೆ ವೀಸಾರಹಿತ ಪ್ರಯಾಣವನ್ನು ಮಾಡಬಹುದು.

 ಭಾರತ ತನ್ನ ರ್ಯಾಂಕ್ ಅನ್ನು ಮಧ್ಯ ಏಷ್ಯಾದ ತಜಿಕಿಸ್ತಾನ ಮತ್ತು ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ಜೊತೆಗೆ ಹಂಚಿಕೊಂಡಿದೆ. ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ 2021ನ್ನು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ ಒದಗಿಸಿದ ದತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಅಸೋಸಿಯೇಷನ್ ವಿಶ್ವದಲ್ಲಿಯ ಸುಮಾರು 290 ವಿಮಾನಯಾನ ಸಂಸ್ಥೆಗಳನ್ನು ಅಥವಾಎ.82ರಷ್ಟು ವಿಮಾನ ಪ್ರಯಾಣಿಕರನ್ನು ಪ್ರತಿನಿಧಿಸುತ್ತದೆ.

ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುವ ಈ ಇಂಡೆಕ್ಸ್ 199 ವಿವಿಧ ಪಾಸ್ಪೋರ್ಟ್ ಗಳು ಮತ್ತು 227 ಪ್ರಯಾಣ ತಾಣಗಳನ್ನು ಒಳಗೊಂಡಿದೆ. ಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತದ ರ್ಯಾಂಕಿಂಗ್ 14 ಸ್ಥಾನಗಳಷ್ಟು ಕುಸಿದಿದೆ. 2014ರಲ್ಲಿ 76ನೇ ಸ್ಥಾನದಲ್ಲಿದ್ದ ಅದು 2021ರಲ್ಲಿ 90ನೇ ಸ್ಥಾನಕ್ಕೆ ಇಳಿದಿದೆ. ಹೆನ್ಲಿ ಪಾಸ್ಪೋರ್ಟ್ ಇಂಡೆಕ್ಸ್ನಂತೆ ಇದು 2006ರಿಂದೀಚಿಗೆ ಭಾರತೀಯ ಪಾಸ್ಪೋರ್ಟ್ನ ಕನಿಷ್ಠ ಸ್ಥಾನವಾಗಿದೆ.

ಆರ್ಟನ್ ಕ್ಯಾಪಿಟಲ್ ನ ಪಾಸ್ಪೋರ್ಟ್ ಇಂಡೆಕ್ಸ್ ನಲ್ಲಿ ಭಾರತವು 68ನೇ ಸ್ಥಾನದಲ್ಲಿದೆ ಮತ್ತು 58 ಅಂಕಗಳನ್ನು ಹೊಂದಿದೆ,ಅಂದರೆ ಭಾರತೀಯ ಪಾಸ್ಪೋರ್ಟ್ ಬಳಸಿ 58 ದೇಶಗಳಿಗೆ ಭೇಟಿ ನೀಡಬಹುದು. ಈ ಪೈಕಿ 19 ದೇಶಗಳಿಗೆ ವೀಸಾರಹಿತವಾಗಿ,ಆಗಮನದ ಬಳಿಕ ವೀಸಾದೊಂದಿಗೆ 36 ದೇಶಗಳಿಗೆ ಮತ್ತು ಇಲೆಕ್ಟ್ರಾನಿಕ್ ಟ್ರಾವೆಲ್ ಅಥಾರಿಟಿಯೊಂದಿಗೆ ಮೂರು ದೇಶಗಳಿಗೆ ಭೇಟಿ ನೀಡಬಹುದು.

2019ರಲ್ಲಿ (ಕೋವಿಡ್ ಸಾಂಕ್ರಾಮಿಕದ ಆರಂಭದಲ್ಲಿ) 48ನೇ ಸ್ಥಾನದಲ್ಲಿದ್ದ ಭಾರತವು 2021ರಲ್ಲಿ 68ನೇ ಸ್ಥಾನಕ್ಕೆ ಕುಸಿದಿದೆ. ಪಾಸ್ಪೋರ್ಟ್ ಇಂಡೆಕ್ಸ್ನಂತೆ ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ದ ಪಾಸ್ಪೋರ್ಟ್ ವಿಶ್ವದಲ್ಲಿಯೇ ಅತ್ಯಂತ ಶಕ್ತಿಶಾಲಿಯಾಗಿದೆ. ಅದನ್ನು ಬಳಸಿ ಒಟ್ಟು 173 ದೇಶಗಳಿಗೆ ಭೇಟಿ ನೀಡಬಹುದು. ಇಂಡೆಕ್ಸ್ನಲ್ಲಿ ಅಫ್ಘಾನಿಸ್ಥಾನ ಕನಿಷ್ಠ ಸ್ಥಾನದಲ್ಲಿದೆ.

ಕೃಪೆ: Scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News