ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಯತ್ನ: ಲೋಕಾಯುಕ್ತದ ಎಸ್‌ಪಿಪಿ ರಾಜೇಶ್ ವಿರುದ್ಧ ಎಫ್ಐಆರ್ ದಾಖಲು

Update: 2021-10-19 04:39 GMT
ನ್ಯಾಯವಾದಿ ಕೆ‌.ಎಸ್.ಎನ್.ರಾಜೇಶ್

ಮಂಗಳೂರು, ಅ.19: ಮಂಗಳೂರಿನ ಲೋಕಾಯುಕ್ತ ವಿಭಾಗದ ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್.ರಾಜೇಶ್ ವಿರುದ್ಧ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿ ನಗರದ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಗಳೂರಿನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ 20 ವರ್ಷದ ಸಂತ್ರಸ್ತೆ ಕಳೆದ ಆಗಸ್ಟ್ 8ರಂದು ನ್ಯಾಯವಾದಿ ಕೆ.ಎಸ್.ಎನ್.ರಾಜೇಶ್ ಅವರ ಕರಂಗಲ್ಪಾಡಿಯ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದಳು. ಈ ನಡುವೆ, ರಾಜೇಶ್ ಯುವತಿಯನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲು ಒತ್ತಾಯಿಸುತ್ತಿದ್ದ. ಕಳೆದ ಸೆ.25ರಂದು ತನ್ನ ಚೇಂಬರ್ ಒಳಗೆ ಕರೆದು ಅಸಭ್ಯವಾಗಿ ವರ್ತಿಸಿದ್ದು, ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಕೆ‌.ಎಸ್.ಎನ್.ರಾಜೇಶ್ ಲೋಕಾಯುಕ್ತದಲ್ಲಿ ದಾಖಲಾಗುವ ಭ್ರಷ್ಟಾಚಾರ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಳೆದ ಕೆಲವು ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದರು. ಲೋಕಾಯುಕ್ತ ಪ್ರಕರಣಗಳಲ್ಲಿ ಸಂತ್ರಸ್ತರ ಪರವಾಗಿ ವಾದಿಸಲು ಸರಕಾರದಿಂದ ನೇಮಕಗೊಂಡ ವಕೀಲರಾಗಿದ್ದರು. ಹೀಗಾಗಿ ರಾಜೇಶ್ ಮಂಗಳೂರಿನಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಎರಡು ದಿನಗಳ ಹಿಂದೆ ರಾಜೇಶ್ ಮತ್ತು ವಿದ್ಯಾರ್ಥಿನಿ ಮಾತನಾಡಿದ್ದು, ಎನ್ನಲಾದ ಫೋನ್ ಕರೆಯ ಆಡಿಯೋ ಹರಿದಾಡಿತ್ತು. ಆಕೆಯನ್ನು ಕಚೇರಿಗೆ ಬರುವಂತೆ ಮತ್ತು ಮುಂದೆಂದೂ ಈ ರೀತಿ ನಡೆದುಕೊಳ್ಳುವುದಿಲ್ಲ. ಇಲ್ಲಿಗೇ ಬಿಟ್ಟು ಬಿಡು ಎಂದು ವಕೀಲ ಗೋಗರೆಯುವ ಆಡಿಯೋ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News