ಒಂದು ವರ್ಷ ಅವಧಿಯಲ್ಲಿ ದೇಶದ ವಿವಿಧೆಡೆ ಆಸ್ತಿ ಖರೀದಿಸಿದ 12 ಕೇಂದ್ರ ಸಚಿವರು: ವರದಿ

Update: 2021-10-19 09:52 GMT

ಹೊಸದಿಲ್ಲಿ: ಕಳೆದ ವರ್ಷದ ಮೊದಲ ಕೋವಿಡ್ ಲಾಕ್ ಡೌನ್ ಅವಧಿಯಿಂದ ಆರಂಭಗೊಂಡು 12 ತಿಂಗಳುಗಳ ಅವಧಿಯಲ್ಲಿ ದೇಶದ ವಿವಿಧೆಡೆಗಳಲ್ಲಿ, ಅಸ್ಸಾಂನಿಂದ ಹಿಡಿದು ತಮಿಳುನಾಡು ತನಕ, 12 ಕೇಂದ್ರ ಸಚಿವರು ಅಥವಾ ಅವರ ಕುಟುಂಬ ಸದಸ್ಯರು ಕೃಷಿ ಹಾಗೂ ಕೃಷಿಯೇತರ ಜಮೀನು ಸೇರಿದಂತೆ ಆಸ್ತಿಗಳನ್ನು ಖರೀದಿಸಿದ್ದಾರೆಂಬ ಅಂಶ ಪ್ರಧಾನಿ ಕಾರ್ಯಾಲಯದ ಅಧಿಕೃತ ವೆಬ್‍ಸೈಟ್‍ನಲ್ಲಿರುವ ಅವರ ಆಸ್ತಿ ಘೋಷಣೆ ಕುರಿತ ಮಾಹಿತಿಗಳಿಂದ ತಿಳಿದು ಬರುತ್ತದೆ ಎಂದು indianexpress.com ವರದಿ ಮಾಡಿದೆ.

ಎಪ್ರಿಲ್ 2020ರಿಂದ ಒಟ್ಟು 12 ಸಚಿವರ 21 ಆಸ್ತಿ ಖರೀದಿಗಳ ಕುರಿತ ಮಾಹಿತಿಯನ್ನು ತಮ್ಮ ಆಸ್ತಿ ಘೋಷಣೆಯಲ್ಲಿ ಒದಗಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ದಕ್ಷಿಣ ದಿಲ್ಲಿಯ ವಸಂತ್ ವಿಹಾರ್‍ನಲ್ಲಿ 3,085.29 ಚದರ ಅಡಿಯ ಎರಡನೇ ಅಂತಸ್ತಿನ ಅಪಾರ್ಟ್‍ಮೆಂಟ್ ಒಂದನ್ನು ರೂ 3.97 ಕೋಟಿಗೆ ಆಗಸ್ಟ್ 8, 2020ರಂದು ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದಾರೆ.

ಮಹಿಳಾ ಸಬಲೀಕರಣ ಸಚಿವೆ ಸ್ಮೃತಿ ಇರಾನಿ ತಮ್ಮ ಸ್ವಕ್ಷೇತ್ರ ಅಮೇಠಿಯಲ್ಲಿ 0.1340 ಹೆಕ್ಟೇರ್ ಜಮೀನನ್ನು ಮೇದನ್ ಮವಯಿ ಗ್ರಾಮದಲ್ಲಿ ಫೆಬ್ರವರಿ 19, 2021ರಂದು ಖರೀದಿಸಿದ್ದು ಅದರ ಈಗಿನ ಮೌಲ್ಯ ರೂ 12.11 ಲಕ್ಷ ಎಂದು ಅಂದಾಜಿಸಲಾಗಿದೆ.

ಶಿಪ್ಪಿಂಗ್ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಅವರು  ಈ ವರ್ಷದ ಫೆಬ್ರವರಿಯಲ್ಲಿ ತಾವು ಅಸ್ಸಾಂ ಸೀಎಂ ಆಗಿದ್ದಾಗ ದಿಬ್ರೂಘರ್ ಎಂಬಲ್ಲಿ ಮೂರು ಆಸ್ತಿ ಖರೀದಿಸಿದ್ದರು.

ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರು ಪಾಟ್ನಾದ ಶಿವಂ ಅಪಾರ್ಟ್‍ಮೆಂಟ್‍ನಲ್ಲಿರುವ ತಮ್ಮ 650 ಚದರ ಅಡಿಯ ಫ್ಲಾಟ್ ಅನ್ನು ಫೆಬ್ರವರಿ 2,2021ರಂದು ರೂ  25 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಕಳೆದ ವರ್ಷದ ತಮ್ಮ ಆಸ್ತಿ ಘೋಷಣೆಯಲ್ಲಿ ಅವರು ಈ ಆಸ್ತಿಯ ಮೌಲ್ಯವನ್ನು ಅಂದಾಜು ರೂ 6.5 ಲಕ್ಷ ಎಂದು ನಮೂದಿಸಿದ್ದರು.

ಸಿಂಗ್ ಅವರ ಪತ್ನಿ ಉಮಾ ಸಿನ್ಹಾ ಅವರು ಜಾರ್ಖಂಡ್‍ನ ದಿಯೋಘರ್‍ನಲ್ಲಿ 1,087 ಚದರ ಅಡಿಯ ಮನೆಯನ್ನು ರೂ 45 ಲಕ್ಷಕ್ಕೆ ಮಾರಾಟ ಮಾಡಿದ್ದರು. ಕಳೆದ ವರ್ಷ ಸಿಂಗ್ ಅವರು ತಮ್ಮ ಆಸ್ತಿ ಘೋಷಣೆಯಲ್ಲಿ ಈ ಆಸ್ತಿಯ ಅಂದಾಜು ಮೌಲ್ಯ ರೂ 7 ಲಕ್ಷ ಎಂದು ನಮೂದಿಸಿದ್ದರು.

ಆರ್ಥಿಕ ವರ್ಷ 2020-21ರಲ್ಲಿ 45 ಕೇಂದ್ರ ರಾಜ್ಯ ಸಚಿವರುಗಳ ಪೈಕಿ ಒಂಬತ್ತು ಮಂದಿ ಆಸ್ತಿ ಖರೀದಿ ಘೋಷಣೆ ಮಾಡಿದ್ದಾರೆ. ಈ ಸಚಿವರ ಪೈಕಿ ಕೇಂದ್ರ ಶಿಪ್ಪಿಂಗ್, ಬಂದರು ಸಚಿವ ಶ್ರೀಪಾದ್  ನಾಯ್ಕ್, ಇಂಧನ ರಾಜ್ಯ ಸಚಿವ ಕೃಷನ್ ಪಾಲ್ ಗುರ್ಜರ್, ಗ್ರಾಹಕ ವ್ಯವಹಾರಗಳ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ,  ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ಭಾನು ಪ್ರತಾಪ್ ಸಿಂಗ್ ವರ್ಮ, ಶಿಕ್ಷಣ ಖಾತೆಯ ರಾಜ್ಯ ಸಚಿವೆ ಅನ್ನಪೂರ್ಣ ದೇವಿ, ಈಶಾನ್ಯ ಪ್ರಾಂತ್ಯ ಅಭಿವೃದ್ಧಿ ಸಚಿವ ಬಿ ಎಲ್ ವರ್ಮ, ಸಂವಹನ ಸಚಿವ ದೇವುಸಿನ್ಹ ಚೌಹಾಣ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಡಾ ಮಹೇಂದ್ರ ಮುಂಜ್ಪುರ ಮತ್ತು ಮೀನುಗಾರಿಕಾ ರಾಜ್ಯ ಸಚಿವ ಡಾ ಎಲ್ ಮುರುಗನ್ ಸೇರಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News