ಹಿಂದಿ ʼರಾಷ್ಟ್ರಭಾಷೆʼ ಎಂದು ಗ್ರಾಹಕನೊಂದಿಗೆ ಅನುಚಿತವಾಗಿ ವರ್ತಿಸಿದ ಉದ್ಯೋಗಿಯನ್ನು ವಜಾ ಮಾಡಿ ಮರುನೇಮಿಸಿದ ಝೊಮ್ಯಾಟೊ

Update: 2021-10-19 13:03 GMT

ಹೊಸದಿಲ್ಲಿ: ಝೊಮ್ಯಾಟೋ ಗ್ರಾಹಕರೊಬ್ಬರು ಎದುರಿಸುತ್ತಿದ್ದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅವರ ಜತೆಗೆ ಸಂಭಾಷಣೆ  ನಡೆಸುವ ವೇಳೆ ಕಂಪೆನಿಯ ಉದ್ಯೋಗಿಯೊಬ್ಬರು "ಹಿಂದಿ ರಾಷ್ಟ್ರೀಯ ಭಾಷೆಯಾಗಿರುವುದರಿಂದ ಎಲ್ಲರಿಗೂ ಅದು ತಿಳಿದಿರಬೇಕು" ಎಂದು ಹೇಳಿದ ಘಟನೆ ಟ್ವಿಟ್ಟರಿಗರ ಭಾರೀ ಆಕ್ರೋಶಕ್ಕೆ ಕಾರಣವಾಯಿತಲ್ಲದೆ ಕಂಪೆನಿಯು ಗ್ರಾಹಕರ ಮೇಲೆ ಹಿಂದಿ ಹೇರುತ್ತಿದೆ ಎಂದು  ಹಲವರು ಆರೋಪಿಸಿದರು.

ನಂತರ ಈ ಘಟನೆ ಕುರಿತಂತೆ ಸಾರ್ವಜನಿಕವಾಗಿ ಕ್ಷಮೆ ಕೋರಿ ಝೊಮ್ಯಾಟೋ ತಮಿಳು ಮತ್ತು ಇಂಗ್ಲಿಷಿನಲ್ಲಿ ಪೋಸ್ಟ್ ಮಾಡಿತಲ್ಲದೆ ಭಾರತದ ವೈವಿಧ್ಯಮಯ ಸಂಸ್ಕೃತಿಯನ್ನು ಕಡೆಗಣಿಸಿದ್ದಕ್ಕಾಗಿ ಸಂಬಂಧಿತ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಹೇಳಿತು.

ಆದರೆ ಇದಾದ ಕೆಲವೇ ಗಂಟೆಗಳಲ್ಲಿ ಝೊಮ್ಯಾಟೋ ಸಿಇಒ ದೀಪೀಂದರ್ ಗೋಯೆಲ್ ಟ್ವೀಟ್ ಮಾಡಿ ಆ ಉದ್ಯೋಗಿಯನ್ನು ಸೇವೆಯಲ್ಲಿ ಮರುಸ್ಥಾಪಿಸಲಾಗಿದೆ ಹಾಗೂ  ಎಲ್ಲಾ ಕಾಲ್ ಸೆಂಟರ್ ಏಜಂಟರು "ಭಾಷೆಗಳು ಮತ್ತು ಪ್ರಾದೇಶಿಕ ಭಾವನೆಗಳಿಗೆ ಸಂಬಂಧಿಸಿದಂತೆ ತಜ್ಞರಲ್ಲ" ಎಂದು  ಬರೆದಿದ್ದಾರೆ.

ಝೊಮ್ಯಾಟೋ ಗ್ರಾಹಕರಾದ ವಿಕಾಶ್ ಎಂಬವರು ತಾವು ಕಂಪೆನಿಯ ಎಕ್ಸಿಕ್ಯುಟಿವ್ ಜತೆಗೆ ನಡೆಸಿದ ಚಾಟ್ ಸಂಭಾಷಣೆಯ  ಸ್ಕ್ರೀನ್ ಶಾಟ್ ಪೋಸ್ಟ್ ಮಾಡಿದ್ದರು ಹಾಗೂ ಅದು ವೈರಲ್ ಆಗಿತ್ತು. ವಿಕಾಶ್ ಅವರಿಗೆ ತಮ್ಮ ಆರ್ಡರ್ ಸಂಬಂಧಿತ ಸಮಸ್ಯೆಯಿದ್ದುದರಿಂದ ರೆಸ್ಟಾರೆಂಟ್ ಅನ್ನು ಸಂಪರ್ಕಿಸುವಂತೆ ಅವರು ಎಕ್ಸಿಕ್ಯುಟಿವ್ ಬಳಿ ಹೇಳಿದ್ದರು. ಅದಕ್ಕೆ ಆತ ರೆಸ್ಟಾರೆಂಟ್ ಅನ್ನು ಐದು ಬಾರಿ ಸಂಪರ್ಕಿಸಿದ್ದರೂ "ಭಾಷಾ ಸಮಸ್ಯೆ"ಯಿಂದಾಗಿ ಸೂಕ್ತ ಸಂವಹನ ನಡೆದಿಲ್ಲ ಎಂದು ತಿಳಿಸಿದ್ದರು.

ಆಗ ವಿಕಾಶ್, ಝೊಮ್ಯಾಟೋ ತಮಿಳುನಾಡಿನಲ್ಲಿ ಸೇವೆ ಸಲ್ಲಿಸುತ್ತಿದ್ದರೆ ತಮಿಳು ತಿಳಿದಿರುವ ಜನರನ್ನು ನೇಮಿಸಬೇಕು ಎಂದು ಹೇಳಿದ್ದರಲ್ಲದೆ ರೀಫಂಡ್ ಒದಗಿಸುವಂತೆ ಕೇಳಿದಾಗ ಉದ್ಯೋಗಿಯು, "ನಿಮ್ಮ ಗಮನಕ್ಕೆ, ಹಿಂದಿ ನಮ್ಮ ರಾಷ್ಟ್ರಭಾಷೆ. ಆದುದರಿಂದ ಎಲ್ಲರಿಗೂ ಅಲ್ಪಸ್ವಲ್ಪ ಹಿಂದಿ ತಿಳಿದಿರಬೇಕು" ಎಂದಿದ್ದರು.

ನಂತರ ಆತ ಅದಕ್ಕೆ ಕ್ಷಮೆ ಕೋರಿದ್ದರೂ ಈ ವಿಚಾರ ಟ್ವಿಟ್ಟರ್‍ನಲ್ಲಿ ದೊಡ್ಡ ರಾದ್ಧಾಂತವನ್ನೇ ಸೃಷ್ಟಿಸಿತ್ತಲ್ಲದೆ ರಿಜೆಕ್ಟ್ ಝೊಮ್ಯಾಟೋ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು.

ಉದ್ಯೋಗಿಯ ಹೇಳಿಕೆ ಝೊಮ್ಯಾಟೋ ನಿಲುವು ಆಗಿರಲು ಸಾಧ್ಯವಿಲ್ಲ ಹಾಗೂ ಕಂಪೆನಿಯು ತನ್ನ ಆ್ಯಪ್‍ನ ತಮಿಳು ಆವೃತ್ತಿ ತಯಾರಿಸುವ ಹಂತದಲ್ಲಿದೆ ಎಂದು ಝೊಮ್ಯಾಟೋ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News