ಪರಿಸರಕ್ಕೆ ಪೂರಕ ಜೀವನಶೈಲಿಯಿಂದ ಮಾತ್ರ ಪರಿಸರ ಬಿಕ್ಕಟ್ಟಿಗೆ ಪರಿಹಾರ: ಮಮತಾ ರೈ

Update: 2021-10-19 15:52 GMT

ಮಣಿಪಾಲ, ಅ.19: ಪರಿಸರದ ಮೂಲತತ್ವಗಳಿಗನುಗುಣವಾಗಿ ನಮ್ಮ ಜೀವನ ಶೈಲಿಗಳನ್ನು ಬದಲಿಸಿಕೊಳ್ಳುವುದರಿಂದ ಮಾತ್ರ ನಾವೀಗ ಎದುರಿಸುತ್ತಿರುವ ಪರಿಸರದ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ ಎಂದು ಕಾರ್ಕಳದ ಕದಿಕೆ ಟ್ರಸ್ಟ್‌ನ ಅಧ್ಯಕ್ಷೆ ಮಮತಾ ರೈ ಅಭಿಪ್ರಾಯಪಟ್ಟಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಇಕೋಸ್ಪಾಟ್’ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಅವರು ‘ಸುಸ್ಥಿರ ಜೀವನಶೈಲಿ’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳನ್ನು ದ್ದೇಶಿಸಿ ಮಾತನಾಡುತಿದ್ದರು. ನಾವೆಲ್ಲರೂ ಒಗ್ಗಟ್ಟಾಗಿ ಮನಸ್ಸು ಮಾಡಿದರೆ ಮಾತ್ರ ಇಂಗಾಲದ ಹೆಜ್ಜೆಗುರುತುಗಳನ್ನು ಅಳಿಸಲು ಸಾಧ್ಯವಿದೆ ಎಂದರು.

‘ನಾವು ಬಳಸುವ ವಸ್ತುಗಳ ಮೇಲೆಯೇ ಉತ್ಪಾದನೆ ಅವಲಂಬಿತವಾಗಿರುವು ದರಿಂದ ಜನರು ತಮ್ಮ ಜೀವನವನ್ನು ಪರಿಸರಕ್ಕೆ ಪೂರಕವಾಗಿಸಿಕೊಂಡರೆ ಉತ್ಪಾದಕರೂ ತಮ್ಮ ನಿಲುವನ್ನು ಬದಲಾಯಿಸಬೇಕಾಗುತ್ತದೆ.’ ಎಂದು ಮಮತಾ ರೈ ಹೇಳಿದರು.

ಹವಾಮಾನ ವೈಪರಿತ್ಯದ ಪರಿಣಾಮಗಳನ್ನು ನಾವೀಗ ನೋಡುತಿದ್ದೇವೆ. ಮಾರ್ಚ್ ತಿಂಗಳಲ್ಲೇ ಪ್ರಾರಂಭಗೊಂಡ ಮಳೆ, ಅಕ್ಟೋಬರ್ ಆದರೂ ಕಡಿಮೆ ಯಾಗುತ್ತಿಲ್ಲ. ಸತತ ಆರು ತಿಂಗಳಿಗೂ ಅಧಿಕ ಸಮಯದಿಂದ ಸುರಿಯುತ್ತಿರುವ ಮಳೆ ರೈತರ ಪ್ರಯತ್ನದ ಮೇಲೆ ಬರೆ ಎಳೆಯುತ್ತಿದೆ. ಅವರ ಕಟಾವಿಗೆ ಸಿದ್ಧವಾದ ಪೈರನ್ನು ಕೊಯ್ಯಲು ಮಳೆ ಅವಕಾಶ ನೀಡುತ್ತಿಲ್ಲ ಎಂದು ಮಮತಾ ರೈ ನುಡಿದರು.

ರೈತರು ತಮ್ಮ ಋತುವಾಧಾರಿತ ಬೆಳೆ ಬೆಳೆಯಲು ಸಾಧ್ಯವಾಗದಿದ್ದರೆ, ಹವಾಮಾನ ಇಷ್ಟೊಂದು ಊಹಾತೀತವಾಗಿ ಪರಿಣಮಿ ಸಿದರೆ ‘ಆಹಾರ ಬಿಕ್ಕಟ್ಟು’ ಭವಿಷ್ಯದಲ್ಲಿ ನಮ್ಮನ್ನು ಕಾಡಲಿದೆ ಎಂದು ಭವಿಷ್ಯ ನುಡಿಯಬಹುದು. ಇದರೊಂದಿಗೆ ಜೇನುನೊಣಗಳ ಸಂತತಿ ನಶಿಸಿದರೆ ನಮ್ಮ ಮುಂದಿನ ಬದುಕು ಊಹಾತೀತವಾಗಿರುತ್ತದೆ ಎಂದವರು ಎಚ್ಚರಿಸಿದರು. ಇಂದು ಪ್ರತಿನಿತ್ಯವೆಂಬಂತೆ ವರದಿಯಾಗುತ್ತಿರುವ ನೆರೆ, ಪ್ರವಾಹ, ಬರ, ಚಂಡಮಾರುತ, ಬರಗಾಲಗಳು ಹವಾಮಾನ ವೈಪರಿತ್ಯದ ದುಷ್ಪರಿಣಾಮಗಳೆಂಬು ದನ್ನು ನಾವು ಆದಷ್ಟು ಬೇಗ ಅರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದರು.

ತಮ್ಮ ಅವಿರತ ಪರಿಶ್ರಮದಿಂದ ‘ಉಡುಪಿ ಸೀರೆ’ ನೆಯ್ಗೆಯನ್ನು ತಮ್ಮ ಕದಿಕೆ ಟ್ರಸ್ಟ್ ಮೂಲಕ ಅಳಿವಿನ ಹಂತದಿಂದ ಪುನರುಜ್ಜೀವನದ ಹಾದಿಗೆ ತಿರುಗಿಸಿರುವ ಮಮತಾ ರೈ ಅವರ ಪ್ರಯತ್ನದಿಂದಾಗಿ ಸುಮಾರು ಎರಡು ದಶಕಗಳ ನಂತರ ಕರ್ನಾಟಕ ಕರಾವಳಿಯ ನೇಕಾರ ಯುವಕರು ಮತ್ತೆ ನೇಕಾರಿಕೆಯತ್ತ ಹೆಚ್ಚು ಒಲವು ತೋರಿಸುತಿದ್ದಾರೆ.

ಪ್ರಸ್ತುತ ಉಡುಪಿ ಸೀರೆ ನೇಕಾರರ ಸಂಖ್ಯೆ ತಾಳಿಪಾಡಿ ನೇಕಾರರ ಸೊಸೈಟಿಯಲ್ಲಿ 8ರಿಂದ 34ಕ್ಕೇರಿದೆ. ಅದೇ ರೀತಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರ ಸಂಖ್ಯೆ 42ರಿಂದ 74ಕ್ಕೇರಿದೆ. ಅಲ್ಲದೇ ಸರಳ ಹಾಗೂ ಪರಿಸರ ಸ್ನೇಹಿ ಜೀವನ, ತೋಟಗಾರಿಕೆ, ಮನೆ ಅಡುಗೆ, ಕೈಮಗ್ಗ ಹಾಗೂ ಕೈಯಿಂದ ಮಾಡಿದ ವಸ್ತುಗಳನ್ನು ಹೆಚ್ಚೆಚ್ಚು ಬಳಸಲು ಮಮತಾ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಅನೇಕರಿಗೆ ಸ್ಪೂರ್ತಿಯನ್ನು ನೀಡುತಿದ್ದಾರೆ.

ಅಧ್ಯಕ್ಷತೆ ವಹಿಸಿದ್ದ ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ,ಸ್ಪರ್ಧಾ ಮನೋಭಾವದ ಬದಲು, ಪರಸ್ಪರ ಸಹಕಾರ ಮನೋಭಾವ ಜೀವನ ವೌಲ್ಯವಾದಾಗ ಮಾನವಕುಲದ ಸರ್ವೋದಯ ಸಾದ್ಯ. ನಾವು ನಡೆಸುವ ಬದುಕಿಗೂ, ಹವಾಮಾನದ ವೈಪರಿತ್ಯಕ್ಕೂ ನೇರ ಸಂಬಂಧವಿದೆ ಎಂದರು.

ಆಕರ್ಷಿಕಾ ಸಿಂಗ್ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾ ಗಾರ್ಗ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಮನಸ್ವಿನಿ ಶ್ರೀರಂಗಂ ‘ಇಕೋಸ್ಪಾಟ್’ ಬಗ್ಗೆ ವಿವರಿಸಿದರು. ವೆಲಿಕಾ ವಂದಿಸಿದರು.

ಇಕೋಸ್ಪಾಟ್ ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಎಂಡ್ ಸಾಯನ್ಸ್‌ನ ವಿದ್ಯಾರ್ಥಿಗಳು ‘ಸುಸ್ಥಿರ ಜೀವನ’ ಕ್ರಮದ ಕುರಿತು ನಡೆಸುತ್ತಿರುವ ಕಾರ್ಯಕ್ರಮವಾಗಿದ್ದು, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣ ಗಳ ಮೂಲಕ ಅಭಿಯಾನವನ್ನು ಜನರಿಗೆ ತಲುಪಿಸಲು ಹಾಗೂ ಸುಸ್ಥಿರ ಜೀವನ ಶೈಲಿ ಬಗ್ಗೆ ಜಾಗೃತಿ ಮೂಡಿಸಲು ಇಂದು ಸಂಘಟಿಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News