ಜಮ್ಮು-ಕಾಶ್ಮೀರ:ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತ, ಭಾರತದ ಮೂವರು ಯೋಧರಿಗೆ ಗಾಯ
Update: 2021-10-20 14:28 IST
ಶ್ರೀನಗರ: ಜಮ್ಮು - ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಎಲ್ ಇಟಿ ಭಯೋತ್ಪಾದಕರು ಹತರಾಗಿದ್ದಾರೆ ಹಾಗೂ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲ್ಲಲ್ಪಟ್ಟ ಓರ್ವ ಭಯೋತ್ಪಾದಕನನ್ನು ಆದಿಲ್ ವಾನಿ ಎಂದು ಗುರುತಿಸಲಾಗಿದ್ದು, ಆತ ಮೂರು ದಿನಗಳ ಹಿಂದೆ ಉತ್ತರ ಪ್ರದೇಶದ ಸಹರಾನ್ ಪುರದ ಬಡಗಿಯೊಬ್ಬನ ಹತ್ಯೆಯಲ್ಲಿ ಭಾಗಿಯಾಗಿದ್ದ ಎಂದು ಕಾಶ್ಮೀರ ವಲಯದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಪಡೆದ ನಂತರ ಭದ್ರತಾ ಪಡೆಗಳು ಶೋಪಿಯಾನ್ ಜಿಲ್ಲೆಯ ಡ್ರಾಗಡ್ ಪ್ರದೇಶದಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.