ಏರ್ ಇಂಡಿಯಾಗೆ ಜುಲೈ 27ರ ತನಕ ವಿವಿಐಪಿ ವಿಮಾನಯಾನ ಸೇವೆಗಳ ರೂ 33.69 ಕೊಟಿ ಬಾಕಿಯಿರಿಸಿದ ಕೇಂದ್ರ ಸರ್ಕಾರ: ವರದಿ

Update: 2021-10-20 09:59 GMT

ಹೊಸದಿಲ್ಲಿ: ಈ ವರ್ಷದ ಜುಲೈ 27ರಲ್ಲಿದ್ದಂತೆ ಭಾರತ ಸರ್ಕಾರವು ಏರ್ ಇಂಡಿಯಾಗೆ ಒಟ್ಟು ರೂ 33.69 ಕೋಟಿ ಬಾಕಿ  ಇರಿಸಿದೆ ಎಂದು ಆರ್‍ಟಿಐ ಅರ್ಜಿಯೊಂದಕ್ಕೆ ನೀಡಿದ ಉತ್ತರದಲ್ಲಿ ಏರ್ ಇಂಡಿಯಾ ತಿಳಿಸಿದೆ ಎಂದು scroll.in ವರದಿ ಮಾಡಿದೆ.

ಈ ಬಾಕಿ ಮೊತ್ತದ ಪೈಕಿ ಪ್ರಧಾನಿ ನರೇಂದ್ರ ಮೋದಿಯ ವಿಮಾನಯಾನ ವೆಚ್ಚಗಳು ರೂ 7.19  ಕೋಟಿ ಆಗಿದ್ದರೆ ರಾಷ್ಟ್ರಪತಿಗಳ ವಿಮಾನಯಾನ ವೆಚ್ಚ ಬಾಕಿ ರೂ 6.12 ಕೋಟಿಯಾಗಿದೆ. ಉಪರಾಷ್ಟ್ರಪತಿಗಳ ವಿಮಾನಯಾನ ವೆಚ್ಚವಾದ ರೂ 10.21 ಕೋಟಿಯನ್ನೂ ಸರ್ಕಾರ ಬಾಕಿಯಿರಿಸಿದೆ ಎಂದು ತಿಳಿದು ಬಂದಿದೆ.

ನಿವೃತ್ತ ಕೊಮೋಡರ್‌ (ನೌಕಾ ಸೇನೆ) ಲೋಕೇಶ್ ಬಾತ್ರಾ ಎಂಬವರು ಸಲ್ಲಿಸಿದ ಆರ್‍ಟಿಐ ಅರ್ಜಿಗೆ ಮೇಲಿನ ಮಾಹಿತಿ ದೊರಕಿದೆ.

ಪ್ರಧಾನಿ ಕಚೇರಿಯ ಕ್ಯಾಬಿನೆಟ್ ಕಾರ್ಯದರ್ಶಿ ಅವರು ಪ್ರಧಾನಿಯ  ವಿಮಾನಯಾನ ಕುರಿತ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ. ಮಾರ್ಚ್ 11, 2020 ಹಾಗೂ ಮಾರ್ಚ್ 15, 2020ರ ನಡುವಿನ ವಿಮಾನಯಾನ ವೆಚ್ಚವೇ ರೂ 4.25 ಕೋಟಿಯಾಗಿದ್ದು ಇದು ಕೂಡ ಬಾಕಿ ಮೊತ್ತದಲ್ಲಿ ಸೇರಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವೂ ಏರ್ ಇಂಡಿಯಾಗೆ  ರೂ 7.21 ಕೋಟಿ ಬಾಕಿಯಿರಿಸಿದೆ. ಇದು ವಿದೇಶಗಳಲ್ಲಿ ಅತಂತ್ರರಾದ ಭಾರತೀಯರನ್ನು ವಾಪಸ್ ಕರೆತರಲು ಒದಗಿಸಿದ ವಿಮಾನ ಸೇವೆಗಳಿಗೆ ಸಂಬಂಧಿಸಿದ್ದಾಗಿದೆ. ವಿದೇಶಿ ಗಣ್ಯರ ವಿಮಾನಯಾನ ವೆಚ್ಚಗಳಾದ ರೂ 2.94 ಕೋಟಿ ಕೂಡ ಪಾವತಿಯಾಗಿಲ್ಲ.

ಮಾರ್ಚ್ 2019ರ ತನಕದ ವಿವಿಐಪಿ ವಿಮಾನಯಾನ ಸೇವೆಗಳಿಗೆ ಪಾವತಿಯಾಗದ ಮೊತ್ತ ಕುರಿತ ಮಾಹಿತಿ ಕೋರಿ ಬಾತ್ರಾ ಈ ಹಿಂದೆ ಕೂಡ ಆರ್‍ಟಿಐ ಅರ್ಜಿ ಸಲ್ಲಿಸಿದ್ದರು. ಆ ಸಂದರ್ಭ ಬಾಕಿ ಮೊತ್ತ ಒಟ್ಟು ರೂ 598.55 ಕೋಟಿ ಆಗಿದ್ದರೆ ಇದರ ಪೈಕಿ ರೂ 297.08 ಕೋಟಿಯನ್ನು ಪ್ರಧಾನಿ ಕಾರ್ಯಾಲಯವೇ ಬಾಕಿ ಇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News