ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ಅನಿರ್ದಿಷ್ಟವಾಗಿ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ

Update: 2021-10-21 17:43 GMT

ಹೊಸದಿಲ್ಲಿ,ಅ.21: ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಪ್ರತಿಭಟನೆಯ ಹಕ್ಕು ಇದೆ,ಆದರೆ ಅವರು ಅನಿರ್ದಿಷ್ಟಾವಧಿಗೆ ರಸ್ತೆಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಗುರುವಾರ ಹೇಳಿದ ಸರ್ವೋಚ್ಚ ನ್ಯಾಯಾಲಯವು,ಈ ಬಗ್ಗೆ ಉತ್ತರಿಸಲು ರೈತ ಒಕ್ಕೂಟಗಳಿಗೆ ಮೂರು ವಾರಗಳ ಕಾಲಾವಕಾಶವನ್ನು ನೀಡಿತು.

ರೈತರ ಪ್ರತಿಭಟನೆಯಿಂದಾಗಿ ರಸ್ತೆ ತಡೆಯುಂಟಾಗಿರುವುದರಿಂದ ದೈನಂದಿನ ಪ್ರಯಾಣಿಕರು ವಿಳಂಬದ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ದೂರಿ ನೊಯ್ಡಾ ನಿವಾಸಿ ಮೋನಿಕಾ ಅಗರವಾಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿದ್ದ ನ್ಯಾ.ಎಸ್.ಕೆ.ಕೌಲ್ ನೇತೃತ್ವದ ಪೀಠವು,ಪ್ರಕರಣವು ಬಾಕಿಯಿದ್ದರೂ ರೈತರ ಪ್ರತಿಭಟಿಸುವ ಹಕ್ಕಿಗೆ ತಾನು ವಿರುದ್ಧವಾಗಿಲ್ಲ,ಆದರೆ ಅಂತಿಮವಾಗಿ ಏನಾದರೂ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

ಯಾವುದೇ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸುವ ಹಕ್ಕನ್ನು ರೈತರು ಹೊಂದಿರಬಹುದು,ಆದರೆ ರಸ್ತೆಗಳನ್ನು ಹೀಗೆ ನಿರ್ಬಂಧಿಸುವಂತಿಲ್ಲ. ಜನರಿಗೆ ರಸ್ತೆಗಳಲ್ಲಿ ಸಂಚರಿಸುವ ಹಕ್ಕು ಇದೆ,ಆದರೆ ನಿರ್ಬಂಧಿಸುವಂತಿಲ್ಲ ಎಂದು ಹೇಳಿತು.

ಈ ಬಗ್ಗೆ ಮೂರು ವಾರಗಳಲ್ಲಿ ಉತ್ತರಿಸುವಂತೆ ಪ್ರಕರಣದಲ್ಲಿ ಕಕ್ಷಿದಾರರಾಗಿ ಸೇರಿಸಲ್ಪಟ್ಟಿರುವ ರೈತ ಒಕ್ಕೂಟಗಳಿಗೆ ಸೂಚಿಸಿದ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಡಿ.7ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News