ಉಡುಗೊರೆ, ಸಿಹಿತಿಂಡಿಯೊಂದಿಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಪುಟಾಣಿಗಳು

Update: 2021-10-21 13:48 GMT

ಬಂಟ್ವಾಳ: ಉಡುಗೊರೆ, ಸಿಹಿತಿಂಡಿಯೊಂದಿಗೆ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಗುರುವಾರ ಭೇಟಿ ನೀಡಿದ ಬಿ.ಸಿ.ರೋಡ್ ತಲಪಾಡಿಯ ಡೈಮಂಡ್ ಇಂಟರ್ ನ್ಯಾಶನಲ್ ಸ್ಕೂಲ್ ಇದರ ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಂವಾದ, ಪೊಲೀಸರ ಕಾರ್ಯ ಚಟುವಟಿಕೆಗಳನ್ನು ಅರಿತುಕೊಳ್ಳುವ ಮೂಲಕ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಿದರು. 

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಹಾಗೂ ಜಂಟಿ ಆಯುಕ್ತ ಹರಿರಾಮ್ ಶಂಕರ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು. 

ವಿದ್ಯಾರ್ಥಿಗಳಾದ ಮುಹಮ್ಮದ್ ಅಖ್ತರ್ ಮತ್ತು ಝಾರಾ ಇಂಶಿಯಾ ಪೊಲೀಸ್ ಹುತಾತ್ಮ ದಿನಾಚರಣೆ ಹಾಗೂ ನಾಗರಿಕ ಜವಾಬ್ದಾರಿಗಳ ಕುರಿತು ಭಾಷಣ ಮಾಡಿದರು. 

ವಿದ್ಯಾರ್ಥಿನಿಯರಾದ ಮೆಹರಿನ್, ಶೀಬಾ, ರಿಂಶಾ, ಆಯಾನ, ಸಭಾ ದೇಶಭಕ್ತಿ ಗೀತೆ ಹಾಡಿದರು. ಮಕ್ಕಳ ಭಾಷಣ ಮತ್ತು ದೇಶಭಕ್ತಿ ಗೀತೆಯನ್ನು ಕೇಳಿದ ಆಯುಕ್ತ ಶಶಿಕುಮಾರ್ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರತಿಯೊಬ್ಬರಿಗೂ ಉಡುಗೊರೆಗಳನ್ನು ನೀಡಿದರು. 

ತಮ್ಮ ಕಚೇರಿ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಕಚೇರಿ ಮತ್ತು ಪೊಲೀಸ್ ಚಟುವಟಿಕೆಗಳನ್ನು ತೋರಿಸಿ ವಿವರಿಸಿದರು. ಆಯುಕ್ತರು ತಮ್ಮ ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಮಾತುಗಳನ್ನಾಡಿದರು. 

ವಿದ್ಯಾರ್ಥಿಗಳಾದ ನಹೀಂ, ಮುಸ್ತಫಾ, ಸಮೀಹ್, ಮಾಝ್, ಹನೂನಾ, ರಯಾನ್, ಲೈಬಾ ಪೊಲೀಸ್ ಆಯುಕ್ತರೊಂದಿಗೆ ಸಂವಾದ ನಡೆಸಿದರು. ಆಯುಕ್ತರ ಕಚೇರಿಯ ಇತರ ಅಧಿಕಾರಿಗಳು ಕೂಡಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ಸಂವಾದ ನಡೆಸಿದರು. 

ವಿದ್ಯಾರ್ಥಿಗಳು ಪೊಲೀಸ್ ಹುತಾತ್ಮ ಗೌರವಾರ್ಥವಾಗಿ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗೆ ಸಿಹಿ ತಿಂಡಿ ಹಂಚಿದರು. ಶಾಲಾ ಟ್ರಸ್ಟಿ ಸನಾ ಅಲ್ತಾಫ್, ಮುಖ್ಯೋಪಾಧ್ಯಾಯ ಗಿರೀಶ್ ಕಾಮತ್ ಆಯುಕ್ತರು ಮತ್ತು ಡಿಸಿಪಿ ಅವರಿಗೆ ಸ್ಮರಣಿಕೆ ಮತ್ತು ಹೂ ಗುಚ್ಚ ನೀಡಿ ಗೌರವಿಸಿದರು. 

ಇತರ ಶಿಕ್ಷಕಿಯರಾದ ರಂಝಿಯಾ, ತಂಶೀರಾ, ಜಿನ್ನಾ, ಸಂಧ್ಯಾ, ರೇವತಿ, ರೇಷ್ಮಾ, ಜಯಲಕ್ಷ್ಮೀ, ನಿಶಾ, ಫರ್ ಹಾನ ಉಪಸ್ಥಿತರಿದ್ದರು. ಶಿಕ್ಷಕಿ ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News