ಅಸಮಾನತೆ ಮತ್ತು ಸಾಮಾಜಿಕ ಅಭಿವೃದ್ಧಿ

Update: 2021-10-21 17:33 GMT

ಯಾವುದೇ ರಾಷ್ಟ್ರದ ಅಭಿವೃದ್ಧಿಯಲ್ಲಿ ಆರ್ಥಿಕ ಅಭಿವೃದ್ಧಿಯಂತೆ ಸಾಮಾಜಿಕ ಅಭಿವೃದ್ಧಿ ಕೂಡ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದರೆ ಭಾರತದಲ್ಲಿನ ಸಾಮಾಜಿಕ ಅನಿಷ್ಠಗಳಾದ ವರ್ಗ, ಜಾತಿ ಮತ್ತು ಲಿಂಗ ಅಸಮಾನತೆಗಳು ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಅಡಚಣೆಗಳಾಗಿವೆ. ಸಾಮಾಜಿಕ ಅಸಮಾನತೆಯು ಇನ್ನೂ ಮುಂದುವರಿಯುತ್ತಿರುವುದು ಬಹು ದೊಡ್ಡ ಆತಂಕವಾಗಿ ಪರಿಣಮಿಸಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಡಗರದಲ್ಲಿದ್ದರೂ ಸಾಮಾಜಿಕ ಸ್ವಾತಂತ್ರ್ಯ ಇನ್ನೂ ಕನಸಿನ ಮಾತಾಗಿಯೇ ಉಳಿದಿದೆ. ಭಾರತೀಯ ನೀತಿ ನಿರೂಪಕರು ಸಾಂಪ್ರದಾಯಿಕವಾಗಿ ಬಡತನ ನಿವಾರಣೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸ್ವಾತಂತ್ರ್ಯಾನಂತರ ಆದಾಯ, ಶಿಕ್ಷಣ, ಆರೋಗ್ಯದ ಮಾನದಂಡಗಳಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆಗಳಾಗಿದ್ದರೂ ಕೂಡ ಸಾಮಾಜಿಕ ಕ್ಷೇತ್ರದಲ್ಲಿ ಮತ್ತಷ್ಟು ಪ್ರಗತಿಯನ್ನು ಸಾಧಿಸಬೇಕಾದ ಅನಿವಾರ್ಯತೆ ಈಗ ಎದುರಾಗಿದೆ.

ಭಾರತ ಮತ್ತು ಇತರ ಕೆಲವು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಅಭಿವೃದ್ಧಿಯಲ್ಲಿ ಸಾಮಾಜಿಕ ಅಂಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿವೆ. ಸಾಮಾಜಿಕ ಅಭಿವೃದ್ಧಿಯ ಪರಿಕಲ್ಪನೆಯು ಮಾನವ ಅಭಿವೃದ್ಧಿಗಿಂತ ವಿಶಾಲವಾಗಿದೆ. ಉದಾರೀಕರಣ ಮತ್ತು ಜಾಗತೀಕರಣ ಪ್ರಕ್ರಿಯೆಗಳು ಸಾಮಾಜಿಕ ಅಭಿವೃದ್ಧಿಯನ್ನು ಸುಧಾರಿಸುವಲ್ಲಿ ವಿಫಲವಾಗಿವೆ. ಬಡತನ, ನಿರುದ್ಯೋಗ, ಆರೋಗ್ಯ, ಶಿಕ್ಷಣ, ನಗರಾಡಳಿತ, ಗ್ರಾಮೀಣಾಭಿವೃದ್ಧಿ, ಮಹಿಳೆಯರ ಸ್ಥಿತಿ-ಗತಿ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸ್ಥಾನ-ಮಾನ, ಕೋಮು ಸೌಹಾರ್ದ, ಮಕ್ಕಳ ಮತ್ತು ತಾಯಂದಿರ ಅರೋಗ್ಯ, ಹಸಿವು, ಆಹಾರ ಮತ್ತು ಪೌಷ್ಟಿಕಾಂಶಗಳ ಲಭ್ಯತೆ, ಸ್ವಚ್ಛ ಕುಡಿಯುವ ನೀರು ಮತ್ತು ನೈರ್ಮಲ್ಯ, ಶೌಚಾಲಯ ವ್ಯವಸ್ಥೆ, ಲಿಂಗ ಅಸಮಾನತೆ, ಮಾನವ ಹಕ್ಕುಗಳು ಸಾಮಾಜಿಕ ಅಭಿವೃದ್ಧಿಯಲ್ಲಿ ಕೆಲವು ಪ್ರಮುಖ ಅಂಶಗಳಾಗಿವೆ.

ಗುಣಮಟ್ಟದ ಶಿಕ್ಷಣವನ್ನು ಪಡೆಯುವಲ್ಲಿ ನಗರ ಪ್ರದೇಶಗಳ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದ ಮಕ್ಕಳು ಹಿಂದುಳಿದಿದ್ದಾರೆ. ಶಿಕ್ಷಣದಂತೆಯೇ ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದಲ್ಲಿಯೂ ವ್ಯಾಪಕವಾದ ಅಸಮಾನತೆಗಳಿರುವುದನ್ನು ಗಮನಿಸಬಹುದು. ಶಿಕ್ಷಣದ ಹೆಚ್ಚಿನ ವೆಚ್ಚ ಮತ್ತು ಕಡಿಮೆ ಗುಣಮಟ್ಟದ ಶಿಕ್ಷಣದ ಕೊರತೆ ಹಾಗೂ ಶಿಕ್ಷಣದಲ್ಲಿನ ಅಸಮಾನತೆಗಳು ಬಡವರಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳು ಶಾಲೆಗಳಿಂದ ಹೊರಗುಳಿಯುವುದಕ್ಕೆ ಮುಖ್ಯ ಕಾರಣಗಳಾಗಿವೆ. ಶಿಕ್ಷಣ ಸಾಮಾಜಿಕ ಬದಲಾವಣೆಯ ಪ್ರಮುಖ ಸಾಧನವಾಗಿದೆ. ಆದ್ದರಿಂದ ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ನೀಡುವತ್ತ ಗಮನ ನೀಡಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಗಮನಿಸಿದರೆ ಆರ್ಥಿಕ ಮತ್ತು ಸಾಮಾಜಿಕ ಒಳಗೊಳ್ಳುವಿಕೆಯಿಂದ ಇಂದಿಗೂ ಸಾಕಷ್ಟು ಜನರು ಹೊರಗುಳಿದಿರುವುದು ಕಂಡು ಬರುತ್ತದೆ. ಈ ಸಾಮಾಜಿಕ ಗುಂಪುಗಳ ನ್ಯಾಯಯುತ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ತಾರತಮ್ಯಗಳನ್ನು ತೊಡೆದು ಹಾಕಲು ಈಗಿರುವ ನೀತಿಗಳಲ್ಲಿ ಅಗತ್ಯ ಬದಲಾವಣೆಯ ಅವಶ್ಯಕತೆ ಇದೆ. ಖಾಸಗಿ ವಲಯದಲ್ಲಿಯೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಅಂಚಿನಲ್ಲಿರುವ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ವಿಸ್ತರಿಸಲು ವ್ಯಾಪಕವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ಈ ದಿಸೆಯಲ್ಲಿ ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸುತ್ತಿಲ್ಲ. ಆರೋಗ್ಯ, ಶಿಕ್ಷಣ, ಉದ್ಯೋಗ ಮತ್ತು ಇತರ ಅವಕಾಶಗಳಲ್ಲಿ ಅಸಮಾನತೆಗಳನ್ನು ಕಡಿಮೆ ಮಾಡಬೇಕಾಗಿದೆ. ಈ ವರ್ಗದ ಮೇಲಿನ ಸಾಮಾಜಿಕ ಬಹಿಷ್ಕಾರಗಳು ಹಲವು ಕಡೆ ಮುಂದುವರಿದೇ ಇವೆ. ಮರ್ಯಾದೆ ಹತ್ಯೆಯಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಮಹಿಳೆಯರ ವಿಷಯದಲ್ಲಿ ವಸಾಹತುಶಾಹಿ ಕಾಲದಲ್ಲಿ ಪ್ರಚಲಿತದಲ್ಲಿದ್ದ ಹಿಂದೂ ಪಿತೃ ಪ್ರಧಾನ ಸಿದ್ಧಾಂತದ ಪ್ರಾಬಲ್ಯವು ಸ್ವಾತಂತ್ರ್ಯಾನಂತರವೂ ಮುಂದುವರಿದಿದೆ. ನಾವು ಸಮಾನತೆಗಾಗಿ ಸಾಂವಿಧಾನಿಕ ಬದ್ಧತೆಯನ್ನು ಹೊಂದಿದ್ದರೂ ಮಹಿಳೆಯರ ಅಸಮಾನತೆ ಮತ್ತು ತಾರತಮ್ಯವನ್ನು ತಗ್ಗಿಸುವಲ್ಲಿ ಇಂದಿಗೂ ಸೀಮಿತ ಪರಿಣಾಮಗಳು ಮಾತ್ರ ಗೋಚರಿಸುತ್ತಿವೆ. ಲಿಂಗ ಸಮಾನತೆಯು ಇಡೀ ಸಮಾಜಕ್ಕೆ ಕಾಳಜಿಯಾಗಿರಬೇಕು.

ಹೆಣ್ಣು ಭ್ರೂಣ ಹತ್ಯೆಯನ್ನು ಇಂದಿಗೂ ಸಂಪೂರ್ಣವಾಗಿ ತಡೆಯಲು ಸಾಧ್ಯವಾಗಿಲ್ಲ. ಬೀದಿ ಮಕ್ಕಳು, ತಪ್ಪಿತಸ್ಥ ಮಕ್ಕಳು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಮಾನವ ಕಳ್ಳಸಾಗಣೆಯ ಬಲಿಪಶುಗಳು, ಲೈಂಗಿಕ ಕಾರ್ಯಕರ್ತರ ಮಕ್ಕಳು, ಏಡ್ಸ್ ರೋಗಿಗಳ ಮಕ್ಕಳು, ನಿರ್ಗತಿಕ ಮಕ್ಕಳು, ಬಾಲ ಭಿಕ್ಷುಕರು ಹಾಗೂ ಮತ್ತಿತರ ಹೀನ ಪರಿಸ್ಥಿತಿಯಲ್ಲಿರುವ ಮಕ್ಕಳ ರಕ್ಷಣೆಗೆ ಮತ್ತಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಬಾಲ ಕಾರ್ಮಿಕ ಪದ್ಧತಿಯೆಂಬ ಅನಿಷ್ಠ ಪದ್ಧತಿಯೂ ಇನ್ನೂ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಯಾವುದೇ ದೇಶದ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಗತಿಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಲ್ಲಿ ಆರೋಗ್ಯವೂ ಒಂದು. ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ.68ರಷ್ಟು ಜನರು ಗ್ರಾಮೀಣ ಭಾರತದಲ್ಲಿದ್ದಾರೆ. ಸಾಂಕ್ರಾಮಿಕ ರೋಗಗಳಿಂದ ಆರಂಭಿಸಿ ಸಾಂಕ್ರಾಮಿಕವಲ್ಲದ ರೋಗಗಳವರೆಗೂ ಈ ಸಮುದಾಯಗಳು ಆರೋಗ್ಯ ವ್ಯವಸ್ಥೆಯ ಸಮಸ್ಯೆಯನ್ನು ಎದುರಿಸುತ್ತಿವೆ.

ಗರ್ಭಿಣಿಯರಲ್ಲಿ ಮಾನಸಿಕ ಅನಾರೋಗ್ಯ ಗ್ರಾಮೀಣ ಭಾರತದಲ್ಲಿ ಕಂಡು ಬರುತ್ತಿರುವ ಮತ್ತೊಂದು ಅತ್ಯಂತ ಗಂಭೀರ ಸಮಸ್ಯೆಯಾಗಿದೆ. ಮಾನಸಿಕ ಆರೋಗ್ಯ ವ್ಯವಸ್ಥೆಯ ಕುರಿತು ನಮ್ಮಲ್ಲಿರುವಷ್ಟು ನಿರ್ಲಕ್ಷ ಮನೋಭಾವವನ್ನು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ತಾಯಂದಿರ ಆರೋಗ್ಯ ಸುಧಾರಣೆ ಕೂಡ ಸಾಮಾಜಿಕ ಅಭಿವೃದ್ಧಿಯಲ್ಲಿ ಬಹಳ ಮುಖ್ಯವಾಗುತ್ತವೆ.
ಏಶ್ಯದ ಇತರ ದೇಶಗಳು ವಿಶೇಷವಾಗಿ ಪೂರ್ವ ಮತ್ತು ಆಗ್ನೇಯ ಏಶ್ಯದ ದೇಶಗಳಿಗೆ ಹೋಲಿಸಿದರೆ ಭಾರತದ ಬೆಳವಣಿಗೆ ನಿಧಾನಗತಿಯಲ್ಲಿದೆ ಎಂದೇ ಹೇಳಬಹುದು. ಉದಾಹರಣೆಗೆ, ಭಾರತವು ಈಗಲೂ ವಿಶ್ವದ ಅತ್ಯಂತ ಬಡತನದ 30 ದೇಶಗಳ ಸಾಲಿನಲ್ಲಿದೆ. 1970ರ ದಶಕದಲ್ಲಿ ಬಡವರ ಪ್ರಮಾಣ ಶೇಕಡಾವಾರು 55ರಷ್ಟಿತ್ತು. ಈ ಪ್ರಮಾಣ 1990ರಲ್ಲಿ 36ಕ್ಕೆ ಇಳಿದಿದ್ದರೂ ಸುಮಾರು 300 ದಶಲಕ್ಷಕ್ಕೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ ಮತ್ತು ನಾಲ್ಕು ವರ್ಷದೊಳಗಿನ ಶೇ.50ಕ್ಕಿಂತ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. 1951ರಿಂದ ಇದುವರೆಗೂ ಸಾಕ್ಷರತೆಯ ಪ್ರಮಾಣ ಸುಮಾರು ಮೂರು ಪಟ್ಟು ಹೆಚ್ಚಾಗಿದ್ದರೂ ಕೂಡ ಶೇ.45ಕ್ಕಿಂತ ಹೆಚ್ಚು ಮಕ್ಕಳು ಐದನೇ ತರಗತಿಯನ್ನು ತಲುಪುತ್ತಿಲ್ಲ.

ದೇಶದಲ್ಲಿ ಬಡತನ ನಿರ್ಮೂಲನೆಗಾಗಿ ದೊಡ್ಡ ಪ್ರಮಾಣದ ಆಹಾರ ಭದ್ರತೆ ಮತ್ತು ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು ಸರಿಯಾದ ಅನುಷ್ಠಾನವಿಲ್ಲದೆ ಸೊರಗುತ್ತಿವೆ. ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಹಸಿವು ಸೂಚ್ಯಂಕದಲ್ಲಿ 116 ರಾಷ್ಟ್ರಗಳ ಪೈಕಿ ಭಾರತ 101ನೇ ಸ್ಥಾನದಲ್ಲಿದೆ. ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳ ರಾಷ್ಟ್ರಗಳಿಗಿಂತ ಕೆಳಗಿನ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಹಸಿ ವು ಸೂಚ್ಯಂಕದಲ್ಲಿ 107 ರಾಷ್ಟ್ರಗಳ ಪೈಕಿ 94ನೇ ಸ್ಥಾನದಲ್ಲಿತ್ತು. ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಜರ್ಮನಿಯ ಹಂಗರ್ ಹಿಲ್ಪ್‌ಎಂಬ ಸಂಸ್ಥೆಗಳು ಜಂಟಿಯಾಗಿ ತಯಾರಿಸಿರುವ ವರದಿಯಲ್ಲಿ ಭಾರತದಲ್ಲಿ ಹಸಿವಿನ ಮಟ್ಟ ಆತಂಕಕಾರಿಯಾಗಿದೆ ಎಂದು ವರ್ಣಿಸಲಾಗಿದೆ. 2000ದಿಂದ ಭಾರತವು ಜಾಗತಿಕ ಹಸಿವು ಸೂಚ್ಯಂಕದಲ್ಲಿ ಪ್ರಗತಿಯನ್ನು ಸಾಧಿಸಿದೆ ಆದರೆ ವಿಶೇಷವಾಗಿ ಮಕ್ಕಳ ಪೌಷ್ಟಿಕಾಂಶದ ವಿಷಯದಲ್ಲಿ ಇನ್ನೂ ಹಿಂದೆ ಉಳಿದಿದೆ. ಜಾಗತಿಕ ಹಸಿವು ಸೂಚ್ಯಂಕ ವರದಿಯಲ್ಲಿ ಒಳಗೊಂಡಿರುವ ರಾಷ್ಟ್ರಗಳ ಪೈಕಿ ಭಾರತವು ಈಗಲೂ ಮಕ್ಕಳ ಬೆಳವಣಿಗೆಯಲ್ಲಿ ಅತಿ ಹೆಚ್ಚು ಕುಂಠಿತವನ್ನು ಹೊಂದಿದೆ. ಪೌಷ್ಟಿಕತೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಭಾರತದಲ್ಲಿ ಹಲವು ಅದ್ಭುತ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆದರೆ ಅವುಗಳ ಅನುಷ್ಠಾನ ಸರಿಯಾಗಿ ಆಗದೇ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

ಹಣಕಾಸಿನ ಕೊರತೆ, ಖಾಸಗಿ ವಲಯದ ಹೂಡಿಕೆ, ಕಡಿಮೆ ಇಂಗಾಲದ ಹಸಿರು ಬೆಳವಣಿಗೆ, ಮೂಲ ಸೌಕರ್ಯ ಅಭಿವೃದ್ಧಿ ಹೀಗೆ ಹಲವು ಸಮರ್ಥನೀಯ ಮತ್ತು ಅಂತರ್ಗತ ಮತ್ತು ಸಾಮಾಜಿಕ ಅಭಿವೃದ್ಧಿಯ ಮಹತ್ವದ ಸವಾಲುಗಳು ಭಾರತದಲ್ಲಿ ಮುಂದುವರಿದಿವೆ. ಭಾರತವು ವಿವಿಧತೆ ಮತ್ತು ವಿಶಾಲತೆಯನ್ನು ಹೊಂದಿರುವುದರಿಂದ ರಾಜ್ಯಗಳ ನಡುವೆ ಮತ್ತು ರಾಜ್ಯಗಳ ಒಳಗೆ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ವ್ಯಾಪಕ ವ್ಯತ್ಯಾಸವು ಆತಂಕಕ್ಕೆ ಕಾರಣವಾಗಿದೆ. ಎಲ್ಲಾ ರಾಜ್ಯಗಳಲ್ಲೂ ಸಮಾನ ಅಭಿವೃದ್ಧಿಗಾಗಿ ಕೇಂದ್ರ ನೀತಿಗಳು, ಸಂಪನ್ಮೂಲಗಳ ಹಂಚಿಕೆ ಅತ್ಯಗತ್ಯ. ಸಂಪನ್ಮೂಲಗಳನ್ನು ಹಂಚುವಾಗ ಕೇಂದ್ರವು ಕೆಲವು ರಾಜ್ಯಗಳಿಗೆ ಪಕ್ಷಪಾತ ಮಾಡಬಾರದು. ಪರಸ್ಪರ ಅಭಿವೃದ್ಧಿಗೆ ರಾಜ್ಯಗಳ ನಡುವೆ ಸಹಯೋಗವನ್ನು ಹೆಚ್ಚಿಸಬೇಕು.

ಭಾರತದಲ್ಲಿ ಸಾಮಾಜಿಕ ನ್ಯಾಯ ಎಂಬ ಕಲ್ಪನೆ ಮತ್ತು ಹೋರಾಟ 12ನೇ ಶತಮಾನದಲ್ಲೇ ನಡೆದವು. ಕ್ರಾಂತಿ ಪುರುಷ ಬಸವಣ್ಣ ಆ ಕಾಲದಲ್ಲಿ ಸಾಮಾಜಿಕ ನ್ಯಾಯದ ಕ್ರಾಂತಿಯ ಅಲೆಯನ್ನು ಎಬ್ಬಿಸಿದರು. ಇಪ್ಪತ್ತನೇ ಶತಮಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಮತ್ತೊಂದು ಶಕೆಯನ್ನು ಆರಂಭಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ನೈಜ, ಅರ್ಥಪೂರ್ಣ ಹಾಗೂ ಗೌರವಯುತ ಬದುಕನ್ನು ಬದುಕುವುದೇ ಸಾಮಾಜಿಕ ನ್ಯಾಯ, ಆದ್ದರಿಂದ ಸರಕಾರ ತನ್ನ ಪ್ರಜೆಗಳಿಗೆ ಸಾಮಾಜಿಕ ನ್ಯಾಯದ ಬದುಕನ್ನು ಬದುಕುವ ವಾತಾವರಣವನ್ನು ನಿರ್ಮಿಸಿಕೊಡಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಇಂದಿಗೂ ಮಲ ಹೊರುವ ಮತ್ತು ಒಳಚರಂಡಿಯ ಕೆಲಸಗಳಿಗೆ ಸಂಪೂರ್ಣವಾಗಿ ಯಂತ್ರಗಳನ್ನು ಬಳಸುತ್ತಿಲ್ಲ. ಹಾಗಾದರೆ ಸರಕಾರಗಳು ಸಂಗ್ರಹಿಸುವ ತೆರಿಗೆ ಹಾಗೂ ಯೋಜನೆಗಳಿಗೆ ಮಾಡುವ ವೆಚ್ಚ ಹೇಗೆ? ಮತ್ತು ಎಲ್ಲಿ ಖರ್ಚಾಗುತ್ತಿದೆ? ತಳ ಸಮುದಾಯದ ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ವೇಶ್ಯಾವೃತ್ತಿಗೆ ದೂಡಲಾಗುತ್ತಿದೆ. ಅರೆ ಬೆತ್ತಲೆ ಮೆರವಣಿಗೆಗಳು ಸಮಾಜದ ಘನತೆಯನ್ನು ಕುಂದಿಸುತ್ತಿವೆ.

ದುರ್ಬಲರು ಮತ್ತು ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳಿದ್ದರೂ ದಲಿತರ ಮೇಲಿನ ದಬ್ಬಾಳಿಕೆಗಳು ಇನ್ನೂ ನಡೆಯುತ್ತಲೇ ಇವೆ. ಸೂಕ್ತ ಸಾಕ್ಷಗಳ ಕೊರತೆ ಮತ್ತು ಬೆದರಿಕೆಗಳಿಂದಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯು ಸಾಮಾಜಿಕ ನ್ಯಾಯವನ್ನು ಅಸ್ತಿತ್ವಕ್ಕೆ ತರದೆ ಹೋದರೆ ಸಾಮಾಜಿಕ ಸಮಾನತೆ ಕನಸಿನ ಮಾತಾಗಿಯೇ ಉಳಿಯಲಿದೆ. ಸಮಾಜ ಯಾವಾಗಲೂ ಚಲನಶೀಲವಾದುದು. ಆದ್ದರಿಂದ ಕೇವಲ ಕಾಲಮಾನಕ್ಕೆ ತಕ್ಕಂತೆ ಕಾಯ್ದೆಗಳನ್ನು ಜಾರಿಗೆ ತಂದರೆ ಮಾತ್ರ ಸಾಲದು, ಅವುಗಳ ಸೂಕ್ತ ಜಾರಿ ಕೂಡ ಮುಖ್ಯ. ಆಗ ಮಾತ್ರ ಈ ಕಾನೂನುಗಳಿಗೆ ಅರ್ಥ ಬರುತ್ತದೆ. ಶೋಷಿತ ಹಿಂದುಳಿದ ಸಮುದಾಯಗಳು ಇಂದಿಗೂ ತಮ್ಮ ಹಕ್ಕಿಗಾಗಿ ಹೋರಾಟ ಮಾಡಲೇಬೇಕಾದ ಸ್ಥಿತಿ ಇರುವುದನ್ನು, ಗೌರವದ ಬದುಕನ್ನು ಕಟ್ಟಿಕೊಳ್ಳುವ ಅವಕಾಶಗಳಿಗಾಗಿ ಸಂಘರ್ಷ ನಡೆಸಬೇಕಾಗಿರುವುದನ್ನು ನೋಡುತ್ತಿ ದ್ದೇವೆ. ಸಮಾಜದ ಹಲವು ಕುಟುಂಬಗಳು ಆನ್‌ಲೈನ್ ತರಗತಿಗಳ ವಿಷಯಕ್ಕೆ ಅನುಭವಿಸಿದ ನೋವು, ಸಂಕಟಗಳು ಈ ದೇಶದಲ್ಲಿ ಇನ್ನೂ ಉಸಿರಾಡುತ್ತಿರುವ ಸಾಮಾಜಿಕ ಅಸಮಾನತೆಯ ಸಂಕೇತವಾಗಿದೆ.

Writer - ಡಾ. ಅಮ್ಮಸಂದ್ರ ಸುರೇಶ್

contributor

Editor - ಡಾ. ಅಮ್ಮಸಂದ್ರ ಸುರೇಶ್

contributor

Similar News