ಚೀನಾ ಜತೆಗಿನ ಭಾರತದ ವಹಿವಾಟು ಗಣನೀಯ ಹೆಚ್ಚಳ!

Update: 2021-10-22 04:04 GMT
ಹರ್ಷ್ ಶೃಂಗ್ಲಾ (Photo credit: twitter@harshvshringla)

ಹೊಸದಿಲ್ಲಿ, ಅ.22: ಪ್ರಸಕ್ತ ಹಣಕಾಸು ವರ್ಷದ ಮೊದಲ ಒಂಭತ್ತು ತಿಂಗಳಲ್ಲಿ ಚೀನಾ ಜತೆಗಿನ ವಹಿವಾಟು 90 ಶತಕೋಟಿ ಡಾಲರ್ ಆಗಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 49ರಷ್ಟು ಅಧಿಕ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ಶೃಂಗ್ಲಾ ಪ್ರಕಟಿಸಿದ್ದಾರೆ. ಆದಾಗ್ಯೂ ಟ್ರೇಡ್ ಬ್ಯಾಲೆನ್ಸ್ ಚೀನಾದ ಪರವಾಗಿದ್ದು, ಹೆಚ್ಚುತ್ತಿರುವ ಕೊರತೆ ವಿಚಾರವನ್ನು ಚೀನಾ ಜತೆ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

"ಇದೇ ದರದಲ್ಲಿ ಮುಂದುವರಿದರೆ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವಹಿವಾಟು ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಲಿದೆ" ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳ ನಡುವಿನ ವಹಿವಾಟು ಮೌಲ್ಯ ಸುಮಾರು 88 ಶತಕೋಟಿ ಡಾಲರ್ ಆಗಿದೆ.

ಪೂರ್ವ ಲಡಾಖ್‌ನಲ್ಲಿ ಉಭಯ ದೇಶಗಳ ನಡುವಿನ ಮಿಲಿಟರಿ ಸಂಘರ್ಷ ತಾರಕಕ್ಕೇರಿರುವ ನಡುವೆ ಮತ್ತು ಚೀನಿ ವಸ್ತುಗಳ ಬಹಿಷ್ಕಾರಕ್ಕೆ ಹಲವು ಸಂಘಟನೆಗಳು ಕರೆ ನೀಡಿರುವ ನಡುವೆಯೇ ಚೀನಾ ಜತೆಗಿನ ವ್ಯವಹಾರ ಗರಿಷ್ಠ ಮಟ್ಟವನ್ನು ತಲುಪಿದೆ.

ಚೀನಾದ ಆರ್ಥಿಕತೆಯ ಲಾಭ ಪಡೆಯುವ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ಬೆಳವಣಿಗೆಗಳು ಗಡಿ ಭಾಗದಲ್ಲಿ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತಂದಿವೆ. ಜತೆಗೆ ಉಭಯ ದೇಶಗಳ ನಡುವಿನ ಸಂಬಂಧದ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದರು. ಎರಡೂ ದೇಶಗಳ ಆಕಾಂಕ್ಷೆ, ಸೂಕ್ಷ್ಮತೆ ಮತ್ತು ಹಿತಾಸಕ್ತಿ ಹಿನ್ನೆಲೆಯಲ್ಲಿ ಉಭಯ ಪಕ್ಷಗಳಿಗೆ ಸಮಾಧಾನವಾಗುವ ರೀತಿಯಲ್ಲಿ ಸಮಸ್ಯೆ ಬಗೆಹರಿಸಲು ಚೀನಾ ಭಾರತದ ಜತೆ ಸಹಕರಿಸುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News