ಅಮೆರಿಕಾದಲ್ಲಿ ಹಸಿ ಈರುಳ್ಳಿ ಸೇವನೆಯಿಂದ ನೂರಾರು ಮಂದಿಗೆ ʼಸಾಲ್ಮೊನೆಲ್ಲಾʼ ಸೋಂಕು

Update: 2021-10-22 06:06 GMT
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್:  ಅಮೆರಿಕಾದ 37 ರಾಜ್ಯಗಳಲ್ಲಿ ನೂರಾರು ಜನರು ಸಾಲ್ಮೊನೆಲ್ಲಾ ಸೋಂಕಿಗೆ ಒಳಗಾಗಿರುವ ಹಿನ್ನೆಲೆಯಲ್ಲಿ ಲೇಬಲ್ ರಹಿತ ಎಲ್ಲಾ ಬಿಳಿ, ಕೆಂಪು ಮತ್ತು ಹಳದಿ ಈರುಳ್ಳಿಗಳನ್ನು ಬಿಸಾಕುವಂತೆ ಜನರಿಗೆ ಅಲ್ಲಿನ ಸರ್ಕಾರ ಸೂಚಿಸಿದೆ.

ಇಲ್ಲಿಯ ತನಕ 652 ಜನರು  ಅನಾರೋಗ್ಯಕ್ಕೀಡಾಗಿದ್ದು ಅವರಲ್ಲಿ 129 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಯಾವುದೇ ಸಾವು ಸಂಭವಿಸಿಲ್ಲ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ತಿಳಿಸಿದೆ. ಅನಾರೋಗ್ಯಕ್ಕೀಡಾದವರ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂದು ಅಂದಾಜಿಸಲಾಗಿದೆ. ಹೆಚ್ಚಿನ ಪ್ರಕರಣಗಳು ಮೇ 31 ಹಾಗೂ ಸೆಪ್ಟೆಂಬರ್ 30ರ ನಡುವೆ ವರದಿಯಾಗಿದೆ.

ಮೆಕ್ಸಿಕೋದ ಚಿಹುವಾಹುವಾ ಎಂಬಲ್ಲಿಂದ ಆಮದು ಮಾಡಿದ ಈರುಳ್ಳಿಯಿಂದ ಸಮಸ್ಯೆ ಉದ್ಭವಿಸಿದೆ ಎನ್ನಲಾಗಿದ್ದು ಈ ಈರುಳ್ಳಿಯ ವಿತರಕ ಸಂಸ್ಥೆ ಪ್ರೊಸೋರ್ಸ್ ಪ್ರೊಡ್ಯೂಸ್ ಎಲ್‍ಎಲ್‍ಸಿ ಆಗಿದೆ.

ಅನಾರೋಗ್ಯಕ್ಕೀಡಾದವರ ಪೈಕಿ ಶೇ 75ರಷ್ಟು ಬಂದಿ ಹಸಿ ಈರುಳ್ಳಿಯನ್ನು ತಿಂದಿದ್ದಾರೆ ಹಾಗೂ ಆಹಾರಕ್ಕೆ ಸೇರಿಸಲಾಗಿದ್ದ ಹಸಿ ಈರುಳ್ಳಿ ತಿಂದಿದ್ದಾರೆ ಎಂದು ಸಿಡಿಸಿ ಹೇಳಿದೆ. ಹೆಚ್ಚಿನವರು ರೆಸ್ಟಾರೆಂಟುಗಳಲ್ಲಿ ಆಹಾರ ಸೇವಿಸಿದ ನಂತರ ಸಮಸ್ಯೆ ಎದುರಿಸಿದ್ದರೆಂದು ಸಿಡಿಸಿ ಹೇಳಿದೆ.

ಕಲುಷಿತ ಆಹಾರ ಸೇವಿಸಿದ ಆರು ಗಂಟೆಯಿಂದ ಆರು ದಿನಗಳೊಳಗಾಗಿ ಜನರು ಬೇಧಿ, ಜ್ವರ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.

ಮೆಕ್ಸಿಕೋದ ಚಿಹುವಾಹುವಾದಿಂದ ಬಂದ ಈರುಳ್ಳಿಗಳನ್ನು,  ಸ್ಟಿಕರ್ ಅಥವಾ ಪ್ಯಾಕೇಜಿಂಗ್ ಇಲ್ಲದ ಈರುಳ್ಳಿ ಖರೀದಿಸದಂತೆ ಹಾಗೂ ಈರುಳ್ಳಿ ತಾಗಿದ ಅಥವಾ ಇಟ್ಟ ಜಾಗಗಳಲ್ಲಿ ಬಿಸಿ ಸೋಪಿನ ನೀರಿನಿಂದ ತೊಳೆಯುವಂತೆ ಸೂಚಿಸಲಾಗಿದೆ.

ಈ ಸಮಸ್ಯೆ ಕುರಿತು  ಎಫ್‍ಡಿಎ ತನಿಖೆಯನ್ನು ಸಿಡಿಸಿ ಮತ್ತು ಇತರ ಸ್ಥಳೀಯ ಅಧಿಕಾರಿಗಳ ಸಹಯೋಗದೊಂದಿಗೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News