ಸಿಂಘು ಗಡಿಯಲ್ಲಿ ಇನ್ನೋರ್ವನಿಗೆ ಹಲ್ಲೆ: ನಿಹಾಂಗ್ ಪಂಥದ ಸಿಖ್ ವ್ಯಕ್ತಿಯ ಸೆರೆ

Update: 2021-10-22 16:02 GMT

ಹೊಸದಿಲ್ಲಿ,22: ದಿಲ್ಲಿ ಹೊರವಲಯದ ಸಿಂಘು ಗಡಿಯಲ್ಲಿ ನಿಹಾಂಗ್ ಸಿಖ್ಖರ ಗುಂಪೊಂದು ದಲಿತ ಕಾರ್ಮಿಕನೋರ್ವನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಇನ್ನೂ ಹಸಿರಾಗಿರುವಾಗಲೇ ಕೋಳಿಯನ್ನು ಉಚಿತವಾಗಿ ನೀಡಲು ನಿರಾಕರಿಸಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದಿರುವ ಘಟನೆ ಗುರುವಾರ ಅದೇ ಪ್ರದೇಶದಲ್ಲಿ ನಡೆದಿದ್ದು,ನಿಹಾಂಗ್ ಸಿಖ್ ಪಂಥಕ್ಕೆ ಸೇರಿದ ಆರೋಪಿ ನವೀನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಹರ್ಯಾಣ ಪೊಲೀಸರು ತಿಳಿಸಿದ್ದಾರೆ.

ಮನೋಜ್ ಪಾಸ್ವಾನ್ ಎಂಬಾತ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು,ಆತ ಕೋಳಿ ಸಾಕಣೆ ಫಾರ್ಮ್ ನ ಉದ್ಯೋಗಿಯಾಗಿದ್ದಾನೆ. ತಾನು ಕೋಳಿಗಳನ್ನು ಸಾಗಿಸುತ್ತಿದ್ದಾಗ ಆರೋಪಿ ತನ್ನನ್ನು ತಡೆದು ಉಚಿತವಾಗಿ ಕೋಳಿಯನ್ನು ಕೇಳಿದ್ದ. ನಿರಾಕರಿಸಿದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪಾಸ್ವಾನ್ ದೂರಿನಲ್ಲಿ ಆರೋಪಿಸಿದ್ದಾನೆ.

ಇತ್ತೀಚಿಗಷ್ಟೇ,ಅ.15ರಂದು ಲಖ್ಬೀರ್ ಸಿಂಗ್ ಎಂಬ ದಲಿತ ಕಾರ್ಮಿಕನ,ಕೈಕಾಲು ತುಂಡರಿಸಿದ್ದ ಶವವು ಸಿಂಘು ಗಡಿಯಲ್ಲಿ ಪೊಲೀಸ್ ಬ್ಯಾರಿಕೇಡ್ ಗೆ ನೇತು ಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ ನಿಹಾಂಗ್ ಸಿಖ್ಖರ ಗುಂಪೊಂದು,ಆತ ಸಿಖ್ಖರ ಪವಿತ್ರ ಗ್ರಂಥವನ್ನು ಅವಮಾನಿಸಿದ್ದ ಎಂದು ಆರೋಪಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರು ನಿಹಾಂಗ್ ಸಿಖ್ಖರನ್ನು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News