ಬೆಂಕಿ ಪೊಟ್ಟಣಕ್ಕೂ ಬೆಲೆ ಏರಿಕೆ ಬಿಸಿ; ಡಿಸೆಂಬರ್ ಒಂದರಿಂದ ದರ ದುಪ್ಪಟ್ಟು

Update: 2021-10-23 04:28 GMT

ಮದುರೈ: ಡಿಸೆಂಬರ್ ಒಂದರಿಂದ ಬೆಂಕಿ ಪೊಟ್ಟಣದ ಬೆಲೆ ದುಪ್ಪಟ್ಟು ಆಗಲಿದೆ. ಇದುವರೆಗೆ ಒಂದು ರೂಪಾಯಿಗೆ ಸಿಗುತ್ತಿದ್ದ ಬೆಂಕಿ ಪೊಟ್ಟಣದ ಬೆಲೆಯನ್ನು 2 ರೂಪಾಯಿಗೆ ಪರಿಷ್ಕರಿಸಲು ಬೆಂಕಿಪೊಟ್ಟಣ ಉದ್ಯಮದ ಐದು ಪ್ರಮುಖ ಸಂಸ್ಥೆಗಳು ಒಮ್ಮತದ ನಿರ್ಧಾರ ಕೈಗೊಂಡಿವೆ. 2007ರಲ್ಲಿ ಬೆಂಕಿಪೊಟ್ಟಣ ದರವನ್ನು 50 ಪೈಸೆಯಿಂದ 1 ರೂಪಾಯಿಗೆ ಹೆಚ್ಚಿಸಲಾಗಿತ್ತು.

ಗುರುವಾರ ನಡೆದ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಸ್‌ನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಚ್ಚಾ ವಸ್ತುಗಳ ದರ ಹೆಚ್ಚಿರುವುದು ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಸಮರ್ಥಿಸಿಕೊಂಡಿದ್ದಾರೆ.

ಬೆಂಕಿ ಪೊಟ್ಟಣ ತಯಾರಿಸಲು 14 ಕಚ್ಚಾವಸ್ತುಗಳು ಬೇಕಾಗುತ್ತವೆ. ಪ್ರತಿ ಕೆಜಿ ಕೆಂಪು ರಂಜಕದ ದರ 425 ರೂಪಾಯಿಯಿಂದ 810 ರೂಪಾಯಿಗೆ ಹೆಚ್ಚಿದೆ. ಮೇಣದ ಬೆಲೆ ರೂ. 58ರಿಂದ 80ಕ್ಕೆ, ಹೊರ ಪೊಟ್ಟಣ ಬೋರ್ಡ್ ದರ 36ರಿಂದ 55 ರೂಪಾಯಿಗೆ, ಒಳಪೊಟ್ಟಣ ಬೋಡ ದರ 32ರಿಂದ 58ಕ್ಕೆ ಹೆಚ್ಚಿದೆ. ಕಾಗದ, ಬಿದಿರಿನ ಪಟ್ಟಿ, ಪೊಟ್ಯಾಶಿಯಂ ಕ್ಲೋರೇಟ್ ಮತ್ತು ಗಂಧಕದ ಬೆಲೆ ಕೂಡಾ ಅಕ್ಟೋಬರ್ 10ರಿಂದ ಹೆಚ್ಚಿವೆ. ಹೆಚ್ಚುತ್ತಿರುವ ಡೀಸೆಲ್ ಬೆಲೆ ಕೂಡಾ ಹೊರೆಯಾಗಿ ಪರಿಣಮಿಸಿದೆ ಎಂದು ಉದ್ಯಮ ಮೂಲಗಳು ಹೇಳಿವೆ.

ತಲಾ 50 ಬೆಂಕಿ ಕಡ್ಡಿಗಳು ಇರುವ 600 ಬೆಂಕಿ ಪೊಟ್ಟಣಗಳನ್ನು ಉತ್ಪಾದಕರು 270 ರಿಂದ 300 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಇದೀಗ ಪ್ರತಿ ಘಟಕದ ಬೆಲೆ ಶೇಕಡ 60ರಷ್ಟು ಹೆಚ್ಚಳವಾಗಲಿದ್ದು, 430-480 ರೂಪಾಯಿ ಆಗಲಿದೆ. ಇದರ ಜತೆಗೆ ಶೇಕಡ 12ರಷ್ಟು ಜಿಎಸ್‌ಟಿ ಮತ್ತು ಸಾಗಾಣಿಕೆ ವೆಚ್ಚ ಸೇರುತ್ತದೆ ಎಂದು ರಾಷ್ಟ್ರೀಯ ಸಣ್ಣ ಬೆಂಕಿಕೊಟ್ಟಣ ಉತ್ಪಾದಕರ ಸಂಘದ ಕಾರ್ಯದರ್ಶಿ ವಿ.ಎಸ್.ಸೇತುರಾತಿನಮ್ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಸುಮಾರು 4 ಲಕ್ಷ ಮಂದಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಉದ್ಯಮವನ್ನು ಅವಲಂಬಿಸಿದ್ದು, ಶೇಕಡ 90ರಷ್ಟು ಉದ್ಯೋಗಿಗಳು ಮಹಿಳೆಯರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News