ಉತ್ತರ ಪ್ರದೇಶ:ಕಾಂಗ್ರೆಸ್‌ನ ಪ್ರತಿಜ್ಞಾ ಯಾತ್ರೆಗೆ ಚಾಲನೆ ನೀಡಿದ ಪ್ರಿಯಾಂಕಾ ಗಾಂಧಿ

Update: 2021-10-23 15:26 GMT

ಲಕ್ನೋ,ಅ.23: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷವು ತೆಗೆದುಕೊಂಡಿರುವ ವಿವಿಧ ನಿರ್ಣಯಗಳನ್ನು ಜನರಿಗೆ ತಲುಪಿಸಲು ಮೂರು ‘ಪ್ರತಿಜ್ಞಾ ಯಾತ್ರೆ ’ಗಳಿಗೆ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶದ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಶನಿವಾರ ಬಾರಾಬಂಕಿಯಲ್ಲಿ ಚಾಲನೆ ನೀಡಿದರು.

ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್,12ನೇ ತರಗತಿಯಲ್ಲಿ ಉತ್ತೀರ್ಣ ವಿದ್ಯಾರ್ಥಿನಿಯರಿಗೆ ಸ್ಮಾರ್ಟ್ ಫೋನ್ ಮತ್ತು ಪದವೀಧರ ಯುವತಿಯರಿಗೆ ಇ-ಸ್ಕೂಟಿ ವಿತರಿಸುವುದಾಗಿ ಈಗಾಗಲೇ ಘೋಷಿಸಿರುವ ಪ್ರಿಯಾಂಕಾ,ಕೃಷಿ ಸಾಲ ಮನ್ನಾ,ಬಡಕುಟುಂಬಗಳಿಗೆ ವಾರ್ಷಿಕ 25,000 ರೂ.,ಎಲ್ಲ ಕುಟುಂಬಗಳಿಗೆ ಅರ್ಧದಷ್ಟು ವಿದ್ಯುತ್ ಬಿಲ್ ಮತ್ತು ಕೋವಿಡ್ ಅವಧಿಯಲ್ಲಿನ ಬಾಕಿಯಿರುವ ವಿದ್ಯುತ್ ಬಿಲ್ಗಳ ಸಂಪೂರ್ಣ ಮನ್ನಾ ಸೇರಿದಂತೆ ಪಕ್ಷದ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳನ್ನು ಶನಿವಾರ ಪ್ರಕಟಿಸಿದರು.

  ಮಾಜಿ ಸಂಸದ ಪ್ರಮೋದ ತಿವಾರಿಯವರ ನೇತೃತ್ವದಲ್ಲಿ ಬಾರಾಬಂಕಿಯಿಂದ ಬುಂದೇಲ್ಖಂಡ,ಪಿ.ಎಲ್.ಪುನಿಯಾ ಮತ್ತು ಮಾಜಿ ಕೇಂದ್ರ ಸಚಿವ ಪ್ರದೀಪ ಜೈನ ಆದಿತ್ಯ ನೇತೃತ್ವದಲ್ಲಿ ಸಹಾರನಪುರದಿಂದ ಮಥುರಾ ಹಾಗೂ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ ಕೃಷ್ಣ ನೇತೃತ್ವದಲ್ಲಿ ವಾರಣಾಸಿಯಿಂದ ರಾಯಬರೇಲಿಗೆ ಮೂರು ಪ್ರತಿಜ್ಞಾ ಯಾತ್ರೆಗಳು ನ.1ರವರೆಗೆ ನಡೆಯಲಿವೆ.


ಈ ಯಾತ್ರೆಗಳ ಸಂದರ್ಭ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯ ಜೊತೆಗೆ ತನ್ನ ‘ಏಳು ಶಪಥ’ಗಳ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸಲಿದೆ.
 12,000 ಕಿ.ಮೀ.ಅಂತರವನ್ನು ಕ್ರಮಿಸಲಿರುವ ಯಾತ್ರೆಗಳ ಸಂದರ್ಭದಲ್ಲಿ ವಿವಿಧ ಸುದ್ದಿಗೋಷ್ಠಿಗಳು,ಬೀದಿಬದಿ ಸಭೆಗಳು,ದೇವಸ್ಥಾನ ಭೇಟಿಗಳು,ರೋಡ್ಶೋಗಳು,ಜನಸಭೆಗಳು ಇತ್ಯಾದಿಗಳು ನಡೆಯಲಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News