ಉತ್ತರಾಖಂಡ ಮಳೆ ದುರಂತದಲ್ಲಿ ಸಾವಿನ ಸಂಖ್ಯೆ 68ಕ್ಕೇರಿಕೆ: 12 ಚಾರಣಿಗರ ಮೃತದೇಹಗಳು ಪತ್ತೆ

Update: 2021-10-23 14:47 GMT

ಹೊಸದಿಲ್ಲಿ,ಅ.23: ಉತ್ತರಾಖಂಡದಲ್ಲಿ ನಡೆಯುತ್ತಿರುವ ಬೃಹತ್ ರಕ್ಷಣಾ ಕಾರ್ಯಾಚರಣೆಗಳ ನಡುವೆಯೇ ರಾಜ್ಯದಲ್ಲಿ ಸುರಿದಿದ್ದ ಭಾರೀ ಮಳೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 68ಕ್ಕೇರಿದೆ. ಹರ್ಸಿಲ್ ಮತ್ತು ಲಂಕಾಘಾ ಪಾಸ್ ಸಮೀಪ ನಾಪತ್ತೆಯಾಗಿರುವ ಎರಡು ಚಾರಣ ತಂಡಗಳ ಸದಸ್ಯರ ಪತ್ತೆಗಾಗಿ ರಕ್ಷಣಾ ಕಾರ್ಯ ಮುಂದುವರಿದಿದೆ.

ಹಾರ್ಸಿಲ್‌ನಲ್ಲಿ ನಾಪತ್ತೆಯಾಗಿದ್ದ 11 ಚಾರಣಿಗರ ಗುಂಪಿನ ಏಳು ಜನರ ಶವಗಳು ಪತ್ತೆಯಾಗಿದ್ದು,ಇಬ್ಬರನ್ನು ರಕ್ಷಿಸಲಾಗಿದೆ. ಇನ್ನಿಬ್ಬರು ಈಗಲೂ ನಾಪತ್ತೆಯಾಗಿದ್ದಾರೆ. ಲಂಕಾಘಾ ಪಾಸ್ ಬಳಿಯಿಂದ ಕಾಣೆಯಾಗಿದ್ದ 11 ಚಾರಣಿಗರ ಇನ್ನೊಂದು ಗುಂಪಿನ ಐವರ ಶವಗಳೂ ಪತ್ತೆಯಾಗಿವೆ ಎಂದು ಉತ್ತರಾಖಂಡ ಡಿಜಿಪಿ ಅಶೋಕ ಕುಮಾರ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಕಳೆದ ರವಿವಾರ ರಾತ್ರಿ ರಾಜ್ಯದಲ್ಲಿ ಆರಂಭಗೊಂಡಿದ್ದ ಭಾರೀ ಮಳೆ ಸುಮಾರು ಮೂರು ದಿನಗಳ ಕಾಲ ನಿರಂತರವಾಗಿ ಸುರಿದಿದ್ದು,ನೆರೆ,ಭೂಕುಸಿತಗಳು ಮತ್ತು ಆಸ್ತಿಪಾಸ್ತಿಗಳ ಭಾರೀ ನಷ್ಟ ಸಂಭವಿಸಿದೆ. ಕುಮಾಂವ್ ಪ್ರದೇಶ ತೀವ್ರವಾಗಿ ಬಾಧಿತಗೊಂಡಿದೆ.

ಬಾಗೇಶ್ವರಿಯ ಪಿಂಡಾರಿ ಮತ್ತು ಕಾಫ್ನಿ ನೀರ್ಗಲ್ಲು ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿದ್ದ ಆರು ವಿದೇಶಿಯರು ಸೇರಿದಂತೆ 65 ಚಾರಣಿಗರನ್ನು ರಕ್ಷಿಸುವಲ್ಲಿ ರಾಜ್ಯ ವಿಪತ್ತು ಪ್ರಕ್ರಿಯಾ ಪಡೆಯು ಯಶಸ್ವಿಯಾಗಿದೆ. ಪಿಥೋಡಗಡದ ಡರ್ಮಾ ಕಣಿವೆಯಿಂದ ಇತರ 23 ಚಾರಣಿಗರನ್ನು ರಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News