ನಮ್ಮ ವ್ಯವಸ್ಥೆ ರೈತರನ್ನು ಯಾವ ಮಟ್ಟಕ್ಕಿಳಿಸಿದೆ?: ಬಿಜೆಪಿ ಸಂಸದ ವರುಣ್ ಗಾಂಧಿ ಆಕ್ರೋಶ
ಹೊಸದಿಲ್ಲಿ,ಅ.23: ನೂತನ ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಪರವಾಗಿ ಮಾತನಾಡಿದ ಮತ್ತು ಉ.ಪ್ರದೇಶದ ಲಖಿಂಪುರ ಖೇರಿಯಲ್ಲಿ ಕೊಲ್ಲಲ್ಪಟ್ಟವರಿಗೆ ನ್ಯಾಯಕ್ಕಾಗಿ ಆಗ್ರಹಿಸಿದ ಬಳಿಕ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿರುವ ಸಂಸದ ವರುಣ ಗಾಂಧಿಯವರು, ದೇಶದ ಕೃಷಿ ನೀತಿಗಳ ಮರುಚಿಂತನೆಗೆ ಕರೆ ನೀಡಿದ್ದಾರೆ.
ತನ್ನ ಬೆಳೆಗೆ ಬೆಂಕಿ ಹಚ್ಚುತ್ತಿರುವ ಲಖಿಂಪುರ ಖೇರಿಯ ರೈತನ ವೀಡಿಯೊವನ್ನು ವರುಣ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ತಾನು ಬೆಳೆದ ಭತ್ತ 15 ದಿನಗಳಿಂದಲೂ ಮಾರಾಟವಾಗಿಲ್ಲ,ಹೀಗಾಗಿ ಅನಿವಾರ್ಯವಾಗಿ ಅದನ್ನು ಸುಡುತ್ತಿದ್ದೇನೆ ಎಂದು ರೈತ ವೀಡಿಯೊದಲ್ಲಿ ಹೇಳಿದ್ದ.
‘ಉ.ಪ್ರದೇಶದ ರೈತ ಸುಮೇಧ ಸಿಂಗ್ ಕಳೆದ 15 ದಿನಗಳಿಂದಲೂ ತಾನು ಬೆಳೆದಿದ್ದ ಭತ್ತದ ಮಾರಾಟದ ಪ್ರಯತ್ನದಲ್ಲಿ ಮಂಡಿಯಿಂದ ಮಂಡಿಗೆ ಅಲೆದಾಡುತ್ತಿದ್ದ. ಅದರೆ ತನ್ನ ಪ್ರಯತ್ನದಲ್ಲಿ ವಿಫಲನಾದಾಗ ಹತಾಶನಾಗಿ ತನ್ನ ಇಡೀ ಬೆಳೆಯನ್ನು ಸುಟ್ಟುಹಾಕಿದ್ದಾನೆ ’ ಎಂದು ವರುಣ್ ಟ್ವೀಟಿಸಿದ್ದಾರೆ.
ತನ್ನ ಭತ್ತದ ರಾಶಿಯ ಮೇಲೆ ಸೀಮೆಎಣ್ಣೆ ಸುರಿದಿದ್ದ ಸಿಂಗ್ ಕೆಲವರು ತಡೆಯಲು ಪ್ರಯತ್ನಿಸಿದ್ದರೂ ಅದಕ್ಕೆ ಬೆಂಕಿ ಹಚ್ಚಿರುವುದನ್ನು ವೀಡಿಯೊ ತೋರಿಸುತ್ತಿದೆ.
‘ನಮ್ಮ ವ್ಯವಸ್ಥೆ ರೈತರನ್ನು ಯಾವ ಮಟ್ಟಕ್ಕಿಳಿಸಿದೆ? ನಾವು ನಮ್ಮ ಕೃಷಿ ನೀತಿಯ ಬಗ್ಗೆ ಮರುಚಿಂತನೆ ನಡೆಸುವ ಅಗತ್ಯವಿದೆ ’ಎಂದು ಕೇಂದ್ರ ಸಚಿವ ಅಜಯಕುಮಾರ್ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ಆರೋಪಿಯಾಗಿರುವ ಲಖಿಂಪುರ ಖೇರಿ ಹಿಂಸಾಕಾಂಡದ ವಿರುದ್ಧ ಈವರೆಗೆ ಧ್ವನಿಯೆತ್ತಿರುವ ಏಕೈಕ ಬಿಜೆಪಿ ನಾಯಕನಾಗಿರುವ ವರುಣ್ ಟ್ವೀಟ್ನಲ್ಲಿ ಬರೆದಿದ್ದಾರೆ.
ವರುಣ್ ಉ.ಪ್ರದೇಶದಲ್ಲಿ ತನ್ನ ಪಕ್ಷವನ್ನು ವಿಶೇಷವಾಗಿ ಟೀಕಿಸುತ್ತಿದ್ದಾರೆ. ಗುರುವಾರ ರಾಜ್ಯದ ತೇರಾಯ್ ಪ್ರದೇಶದಲ್ಲಿ ನೆರೆಹಾವಳಿಯ ಚಿತ್ರಗಳನ್ನು ಟ್ವೀಟಿಸಿದ್ದ ಅವರು,ಯೋಗಿ ಆದಿತ್ಯನಾಥ ಸರಕಾರವನ್ನು ತೀವ್ರ ತರಾಟೆಗೆತ್ತಿಕೊಂಡಿದ್ದರು.