ಕೆಎಸ್ಸಾರ್ಟಿಸಿ ನೌಕರರ ಮುಷ್ಕರ 3ನೇ ದಿನಕ್ಕೆ; ಸೋಮವಾರದಿಂದ ಅಮರಣಾಂತ ಉಪವಾಸ-ಶಾಂತಾರಾಮ ವಿಟ್ಲ

Update: 2021-10-23 16:26 GMT

ಪುತ್ತೂರು: ಕೆಸ್ಸಾರ್ಟಿಸಿ ನೌಕರರ ಮಾಸಿಕ ವೇತನ, ನಿವೃತ್ತ ನೌಕರರ ನಿವೃತ್ತಿ ಸೌಲಭ್ಯ ವಿಳಂಭ ಸೇರಿದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸುವಂತೆ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್ ಜವಾನ್ ಜ್ಯೋತಿ ಬಳಿಯಲ್ಲಿ ಆ.21ರಿಂದ ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ಶನಿವಾರ ಮೂರನೇ ದಿನಕ್ಕೆ ಕಾಲಿರಿಸಿದೆ.

ಶನಿವಾರದ ಮುಷ್ಕರವನ್ನು ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಉಪಾಧ್ಯಕ್ಷರ ಸಂಜೀವ ಗೌಡ ಉದ್ಘಾಟಿಸಿದರು. ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸಂಜೀವ ಮಠಂದೂರು ಅವರು ನ್ಯಾಯ ಕೊಡಿಸುವ ಭರವಸೆ ನೀಡಿದರು. ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯು ಜಿಲ್ಲೆಯ 7 ಮಂದಿ ಶಾಸಕರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಕೆಸ್ಸಾರ್ಟಿಸಿ ನೌಕರರ ಸಮಸ್ಯೆಯ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆವಿಷಯ ತರುವುದಾಗಿ ಶಾಸಕರು ತಿಳಿಸಿದರು.

ಪುತ್ತೂರು ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮುಷ್ಕರ ನಿರತರನ್ನು ಭೇಟಿ ಮಾಡಿ ಮುಷ್ಕರಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿ ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವರ, ಬಿಜೆಪಿ ರಾಜ್ಯಾಧ್ಯಕ್ಷರ ಗಮನಕ್ಕೆ ತರುವುದಾಗಿ ತಿಳಿಸಿದರು.

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅ.25ರಿಂದ ಕಿಲ್ಲೆ ಮೈದಾನದ ಅಮರ್‍ಜವಾನ್ ಜ್ಯೋತಿ ಬಳಿ ಅಮರಣಾಂತ ಸತ್ಯಾಗ್ರಹವನ್ನು ಆರಂಭಿಸುವುದಾಗಿ ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ಪ್ರಧಾನ ವಕ್ತಾರ ಶಾಂತಾರಾಮ ವಿಟ್ಲ ತಿಳಿಸಿದ್ದಾರೆ.

ಶನಿವಾರದ ಮುಷ್ಕರದಲ್ಲಿ ವೆಂಕಟ್ರಮಣ ಭಟ್, ಸತ್ಯಶಂಕರ ಭಟ್, ಬಿ.ಆರ್.ಆನಂದ, ರಾಮಚಂದ್ರ ಅಡಪ, ಕರುಣಾಕರ ಗೌಡ ಕೊಳಕ್ಕೆ, ಲೋಕಯ್ಯ, ಗಂಗಾಧರ, ಪೂವಪ್ಪ ಗೌಡ, ಶೀನ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News