ವರ್ಷದೊಳಗೆ ಉಡುಪಿ ನಗರ ಡಿಜಿಟಲ್ ಸ್ಮಾರ್ಟ್ ಸಿಟಿ: ರಘುಪತಿ ಭಟ್

Update: 2021-10-24 13:23 GMT

ಉಡುಪಿ, ಅ.24: ಮುಂದಿನ ಒಂದು ವರ್ಷದೊಳಗೆ ಉಡುಪಿ ನಗರವನ್ನು ಕೇಂದ್ರ, ರಾಜ್ಯ ಹಾಗೂ ನಗರಸಭೆಯ ಯಾವುದೇ ಅನುದಾನವಿಲ್ಲದೆ ಪಿಪಿಪಿ ಮಾದರಿ ಮೂಲಕ ಡಿಜಿಟಲ್ ಸ್ಮಾರ್ಟ್ ಸಿಟಿಯನ್ನಾಗಿ ಮಾಡಲಾಗುವುದು ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.

ಸ್ಮಾಟ್ ಸಿಟಿ ಎನಾರ್ಜಿ ಸೇವಿಂಗ್ ಸಲ್ಯೂಶನ್ಸ್ ಲಿಮಿಟೆಡ್ ಮೂಲಕ ನಗರ ಸಭಾ ವ್ಯಾಪ್ತಿಯಲ್ಲಿ ದಾರಿದೀಪಗಳನ್ನು ಎಲ್‌ಇಡಿ ಆಗಿ ಪರಿವರ್ತಿಸುವ ಕಲ್ಸಂಕ- ಅಂಬಾಗಿಲು ಮಾರ್ಗದ ಇ-ಸ್ಮಾರ್ಟ್ ಎಲ್‌ಇಡಿ ಲೈಟ್‌ಗಳ ಪ್ರಾಯೋಗಿಕ ಯೋಜನೆಗೆ ನಗರದ ಜೋಡುಕಟ್ಟೆಯಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಉಡುಪಿ ಸ್ಮಾರ್ಟ್ ಸಿಟಿ ಡಿಪಿಆರ್‌ನ್ನು ರಾಜ್ಯ ಸರಕಾರದ ಮುಖ್ಯಕಾರ್ಯ ದರ್ಶಿಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಅನುಮೋದನೆ ಬಾಕಿ ಇದೆ. ಎರಡು ತಿಂಗಳಲ್ಲಿ ಅಂತಿಮವಾಗಲಿದೆ. ಈ ನಡುವೆ ನಗರಸಭೆ ಬೀದಿ ದೀಪಗಳನ್ನು ಸ್ಮಾರ್ಟ್ ಲೈಟ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಸ್ಮಾರ್ಟ್ ಎಲ್‌ಇಡಿ ಲೈಟ್ ಆಳಡಿಸಲು ನಿರ್ಧರಿಸಲಾಗಿತ್ತು. ಉಡುಪಿ ನಗರದಲ್ಲಿ 17,000 ಬೀದಿ ದೀಪಗಳಲ್ಲಿ ಸುಮಾರು 8,000 ದೀಪ ಗಳನ್ನು ಎಲ್‌ಇಡಿಗಳಾಗಿ ಈಗಾಗಲೇ ಪರಿವರ್ತಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದ ಟೆಂಡರ್‌ನಲ್ಲಿ ನಗರಸಭೆಯನ್ನು ಕೈ ಬಿಡಲಾಗಿತ್ತು ಎಂದರು.

ಇದೀಗ ಸ್ಮಾಟ್ ಸಿಟಿ ಎನಾರ್ಜಿ ಮೂಲಕ ಈ ಯೋಜನೆಯನ್ನು ಕೈಗೆತ್ತಿಕೊಳ್ಳ ಲಾಗಿದೆ. ನಗರಸಭೆ ಅಧಿವೇಶನದಲ್ಲಿ ಒಪ್ಪಿಗೆ ಪಡೆದುಕೊಂಡು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ. ಈ ಯೋಜನೆಯ ಪ್ರಾಯೋಗಿಕವಾಗಿ ಮಾಡಲಾಗುತ್ತಿದ್ದು, ಯಶಸ್ವಿಯಾದರೆ ಮುಂದೆ ನಗರಸಭೆ ಯಾದ್ಯಂತ ಸುಮಾರು 20,000 ಬೀದಿಗಳನ್ನು ಈ ಯೋಜನೆ ಮೂಲಕ ಆಳವಡಿಸಲಾಗುವುದು. ಇದರಿಂದ ಒಟ್ಟು ವಿದ್ಯುತ್ ಬಿಲ್‌ನ ಮೊತ್ತ ಶೇ.60 ಉಳಿತಾಯವಾಗಲಿದೆ. ಬಿಲ್‌ನ ಒಟ್ಟು ಮೊತ್ತದ ಶೇ.90ರಷ್ಟು ಹಣ ಸಂಸ್ಥೆಗೆ, ಶೇ.10ರಷ್ಟು ನಗರಸಭೆ ಉಳಿಕೆಯಾಗಲಿದೆ ಎಂದು ಅವರು ಹೇಳಿದರು.

ಪ್ರತಿವರ್ಷ ಬೀದಿ ದೀಪಗಳ ನಿರ್ವಹಣೆಗೆ ಸುಮಾರು 70ಲಕ್ಷ ರೂ. ಬಳಕೆ ಮಾಡಲಾಗುತ್ತಿದೆ. ಅವರು ಸರಿಯಾಗಿ ನಿರ್ವಹಣೆ ಮಾಡದೆ ಇರುವುದರಿಂದ ಪ್ರಸ್ತುತ ಬೀದಿ ದೀಪಗಳ ಸಮಸ್ಯೆ ಎದುರಾಗುತ್ತಿದೆ. ಇ -ಸ್ಮಾರ್ಟ್ ವ್ಯವಸ್ಥೆಯಲ್ಲಿ ವಿದ್ಯುತ್ ಸೇವಿಂಗ್, ಸ್ಮಾರ್ಟ್ ಮೀಟರ್, ಕಂಟ್ರೋಲ್ ರೂಮ್, 24 ಗಂಟೆಯೊಳಗೆ ದುರಸ್ತಿ ಮಾಡುವ ಬಗ್ಗೆ ಮಾತುಕತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾಪು ಶಾಸಕ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಜಿಪಂ ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ, ಹರೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನಗರಸಭೆ ಅಧ್ಯಕ್ಷ, ಸದಸ್ಯರಿಗೆ ಮಾಹಿತಿಯೇ ಇಲ್ಲ!

ನಗರಸಭೆಯ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ನಗರದ 35 ವಾರ್ಡ್ ಗಳಲ್ಲಿ 20,000 ಎಲ್‌ಇಡಿ ಬೀದಿ ದೀಪಗಳನ್ನು ಆಳವಡಿಸುವ ಯೋಜನೆಗೆ ಚಾಲನೆ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ, ಸದಸ್ಯರು, ಪೌರಾಯುಕ್ತರು ಹಾಗೂ ಅಧಿಕಾರಿಗಳಿಗೆ ಯಾವುದೇ ಮಾಹಿತಿ ಹಾಗೂ ಆಹ್ವಾನ ಇಲ್ಲದ ಹಿನ್ನೆಲೆಯಲ್ಲಿ ಅವರೆಲ್ಲರ ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ನಗರಸಭೆ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಈ ಕಾರ್ಯಕ್ರಮಕ್ಕೆ ನಗರಸಭೆಯವರಿಗೆ ಮಾಹಿತಿ ನೀಡದೆ ಇರುವುದು ಸಾಕಷ್ಟು ಚರ್ಚೆಗೆ ಕಾರಣ ವಾಗಿದೆ. ಈ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗುವ ಸಾಧ್ಯತೆಗಳು ಇವೆ ಎಂದು ನಗರಭೆ ಸದಸ್ಯರ ಮೂಲಗಳು ತಿಳಿಸಿವೆ.

‘ಸಾಮಾನ್ಯ ಸಭೆಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅದರ ಭಾಗವಾದ ಪ್ರಾಯೋಗಿಕ ಆಳವಡಿಕೆ ಚಾಲನೆ ಕಾರ್ಯಕ್ರಮದ ಬಗ್ಗೆ ನಮಗೆ ಯಾವುದೇ ಮಾಹಿತಿ ಹಾಗೂ ಆಹ್ವಾನವೂ ಇರಲಿಲ್ಲ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News