ಪೆಟ್ರೋಲ್ ಬೆಲೆಗಳ ಮೇಲಿನ ‘ತೆರಿಗೆ ದರೋಡೆ’ ನಡೆಯುತ್ತಿದೆ: ಕಾಂಗ್ರೆಸ್ ವಾಗ್ದಾಳಿ

Update: 2021-10-24 15:42 GMT

ಹೊಸದಿಲ್ಲಿ,ಅ.24: ಇಂಧನಗಳ ಬೆಲೆಯೇರಿಕೆಗಾಗಿ ಕಾಂಗ್ರೆಸ್ ರವಿವಾರ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಸರಕಾರವನ್ನು ತರಾಟೆಗೆತ್ತಿಕೊಂಡಿರುವ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು, ಪೆಟ್ರೋಲ್ ಬೆಲೆಗಳ ಮೇಲಿನ ‘ತೆರಿಗೆ ದರೋಡೆ’ಯು ಹೆಚ್ಚುತ್ತಿದೆ ಮತ್ತು ಎಲ್ಲಿಯಾದರೂ ಚುನಾವಣೆಗಳು ನಡೆದರೆ ಇದಕ್ಕೆ ಸ್ವಲ್ಪ ವಿರಾಮ ಬೀಳಲಿದೆ ಎಂದು ಟ್ವೀಟಿಸಿದ್ದಾರೆ.

ಇಂಧನಗಳ ಬೆಲೆಯೇರಿಕೆಗಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಜನರಿಗೆ ತೊಂದರೆಗಳನ್ನು ನೀಡುವಲ್ಲಿ ಮೋದಿ ಸರಕಾರವು ದಾಖಲೆಯನ್ನು ಸೃಷ್ಟಿಸಿದೆ ಎಂದು ಆರೋಪಿಸಿದ್ದಾರೆ.

ಈ ವರ್ಷ ಪೆಟ್ರೋಲ್ ಬೆಲೆಗಳಲ್ಲಿ 23.53 ರೂ.ಗಳಷ್ಟು ದಾಖಲೆಯ ಏರಿಕೆಯಾಗಿದೆ ಎಂಬ ಮಾಧ್ಯಮ ವರದಿಯನ್ನು ಟ್ಯಾಗ್ ಮಾಡಿರುವ ಪ್ರಿಯಾಂಕಾ,‘ಸಾರ್ವಜನಿಕರಿಗೆ ತೊಂದರೆಗಳನ್ನು ನೀಡುವಲ್ಲಿ ಮೋದಿ ಸರಕಾರವು ದೊಡ್ಡ ದಾಖಲೆಗಳನ್ನು ಮಾಡಿದೆ. ಅತ್ಯಂತ ಹೆಚ್ಚಿನ ನಿರುದ್ಯೋಗ ಮೋದಿ ಆಡಳಿತದಲ್ಲಿ,ಸರಕಾರಿ ಆಸ್ತಿಗಳು ಮಾರಾಟವಾಗುತ್ತಿರುವುದು ಮೋದಿ ಆಡಳಿತದಲ್ಲಿ,ಪೆಟ್ರೋಲ್ ಬೆಲೆ ವರ್ಷದಲ್ಲಿ ಅತ್ಯಂತ ಹೆಚ್ಚು ಏರಿಕೆಯಾಗಿರುವುದು ಮೋದಿ ಆಡಳಿತದಲ್ಲಿ’ ಎಂದು ಟ್ವೀಟಿಸಿದ್ದಾರೆ.
ಪ್ರಿಯಾಂಕಾ ಹಂಚಿಕೊಂಡಿರುವ ವರದಿಯನ್ನೇ ಟ್ಯಾಗ್ ಮಾಡಿರುವ ಕಾಂಗ್ರೆಸ್ನ ಮುಖ್ಯ ವಕ್ತಾರ ರಣದೀಪ ಸುರ್ಜೆವಾಲಾ ಅವರು ‘ಅಚ್ಛೇ ದಿನ್’ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News