1ರಿಂದ 5ನೇ ತರಗತಿ ಆರಂಭ: ಶಾಲೆಗಳ ಆವರಣದಲ್ಲಿ ಮಕ್ಕಳ ಕಲರವ

Update: 2021-10-25 04:22 GMT

ಮಂಗಳೂರು, ಅ. 25: ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಳೆದ ಸುಮಾರು ಒಂದು ವರ್ಷ ಎಂಟು ತಿಂಗಳ ಕಾಲ ಬಂದ್ ಆಗಿದ್ದ 1ರಿಂದ 5ನೇ ವರೆಗಿನ ಭೌತಿಕ ತರಗತಿಗಳು ಇಂದಿನಿಂದ ಆರಂಭಗೊಂಡಿವೆ. ದೀರ್ಘಕಾಲದ ಬಿಡುವಿನ ಬಳಿಕ ಇಂದು ಪುಟಾಣಿ ಮಕ್ಕಳು ಸಂತಸದ ಜತೆಗೆ ಶಾಲೆಗಳಗತ್ತ ಹೆಜ್ಜೆ ಹಾಕಿದ್ದಾರೆ.

ಕಳೆದ ಕೆಲ ದಿನಗಳಿಂದಲೇ ಪುಟಾಣಿ ಮಕ್ಕಳನ್ನು ಆದರದಿಂದ ಶಾಲೆಗಳಿಗೆ ಸ್ವಾಗತಿಸಲು ತಯಾರು ನಡೆದಿದ್ದು, ಶಾಲೆಗಳು ಸುಣ್ಣ ಬಣ್ಣ ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡಿವೆ.

ದ.ಕ. ಜಿಲ್ಲೆಯಾದ್ಯಂತ ಸರಕಾರಿ, ಖಾಸಗಿ, ಅನುದಾನಿತ ಸೇರಿದಂತೆ ಬಹುತೇಕ ಶಾಲೆಗಳು ಇಂದು ಆರಂಭಗೊಂಡಿದ್ದು, ಶಾಲೆಗಳಲ್ಲಿ ಪುಟಾಣಿಗಳನ್ನು ಶಿಕ್ಷಕರು ಸಂಭ್ರಮದಿಂದಲೇ ಸ್ವಾಗತಿಸುತ್ತಿದ್ದಾರೆ. ಮನೆ ಸಮೀಪದ ಮಕ್ಕಳು ಕಾಲ್ನಡಿಗೆಯಲ್ಲಿ ಬಹುತೇಕವಾಗಿ ಖುದ್ದಾಗಿ ಆಗಮಿಸಿದ್ದರೆ, ಕೆಲವರು ತಮ್ಮ ಪೋಷಕರ ಕೈ ಹಿಡಿದು ಶಾಲೆ ಪ್ರವೇಶಿಸಿದ್ದಾರೆ. ಪುಟ್ಟ ಮಕ್ಕಳಲ್ಲಿ ಶಾಲಾರಂಭದ ಖುಷಿ ಜತೆಗೆ ಕೆಲವರಲ್ಲಿ ಉದಾಸೀನದ ಸೆಳೆಯು ಕಂಡುಬಂತು.

ನಗರದ ಬೊಕ್ಕಪಟ್ಣ ಸರಕಾರಿ ಶಾಲೆ ಹಾಗೂ ಗಾಂಧಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಳಿ ಕೆಲ ಪುಟಾಣಿಗಳು ಶಾಲಾ ಗೇಟು ಹತ್ತಿ ಸಂಭ್ರಮಿಸುತ್ತಿರುವುದು ಕಂಡುಬಂತು.

ನಗರದ ಕೆಲ ಶಾಲೆಗಳಲ್ಲಿ 1ನೆ ತರಗತಿ, ಹಾಗೂ ಇತರ ತರಗತಿಗಳನ್ನು ನಾಳೆಯಿಂದ, ಕೆಲವೆಡೆ ನವೆಂಬರ್ 2ರಿಂದ ಮತ್ತೆ ಕೆಲವೆಡೆ ಒಂದೆರಡು ದಿನಗಳ ಬಳಿಕ ಆರಂಭಿಸಲು ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News