ಕ್ಷಿಪ್ರಕ್ರಾಂತಿ: ಸುಡಾನ್ ಪ್ರಧಾನಿ, ಸಚಿವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದ ಭದ್ರತಾ ಪಡೆಗಳು

Update: 2021-10-25 09:23 GMT
ಅಬ್ದುಲ್ಲಾ ಹಮ್ದೋಕ್ (Photo: Twitter/@SudanPMHamdok)

ಸುಡಾನ್: ಸುಡಾನ್‍ನಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು ಅಲ್ಲಿನ ಪ್ರಧಾನಿ ಅಬ್ದುಲ್ಲಾ ಹಮ್ದೋಕ್ ಅವರನ್ನು ಭದ್ರತಾ ಪಡೆಗಳು ಬಂಧಿಸಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದಿವೆ. ಅಬ್ದುಲ್ಲಾ ಅವರು ದೇಶದಲ್ಲಿ ನಡೆಯುತ್ತಿರುವ ಕ್ಷಿಪ್ರಕ್ರಾಂತಿಗೆ ಬೆಂಬಲ ಸೂಚಿಸಿ ಹೇಳಿಕೆ ಬಿಡುಗಡೆಗೊಳಿಸಲು ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ. ಸೈನಿಕರು ದೇಶದ ಹಲವಾರು ನಾಯಕರನ್ನು ಸುತ್ತುವರಿದಿದ್ದಾರೆಂಬ ಮಾಹಿತಿಯಿದೆ ಎಂದು ವರದಿಯಾಗಿದೆ.

ಸುಡಾನ್ ಪ್ರಧಾನಿಯ ಮನೆಯನ್ನು ಭದ್ರತಾ ಪಡೆಗಳು ಸುತ್ತುವರಿದಿವೆ ಹಾಗೂ ಅವರನ್ನು ಗೃಹ ಬಂಧನದಲ್ಲಿರಿಸಲಾಗಿದೆ ಎಂದು ಈ ಹಿಂದೆ ಹೇಳಲಾಗಿತ್ತು.

ದೇಶದ ಕೈಗಾರಿಕಾ ಸಚಿವ ಇಬ್ರಾಹಿಂ ಅಲ್-ಶೇಖ್, ಸುಡಾನ್ ರಾಜಧಾನಿ ಖರ್ತೌಮ್ ಇಲ್ಲಿನ ರಾಜ್ಯಪಾಲ ಅಯ್ಮಾನ್ ಖಾಲಿದ್, ಮಾಹಿತಿ ಸಚಿವ ಹಂಝಾ ಬಲೌಲ್, ಪ್ರಧಾನಿಯ ಮಾಧ್ಯಮ ಸಲಹೆಗಾರ ಫೈಸಲ್ ಮುಹಮ್ಮದ್ ಸಲೇಹ್,  ಆಡಳಿತ ಸಾವರಿನ್ ಕೌನ್ಸಿಲ್‍ನ ವಕ್ತಾರ ಮುಹಮ್ಮದ್ ಅಲ್-ಫಿಕಿ ಸುಲೈಮಾನ್ ಸಹಿತ ಹಲವರನ್ನು ಸೇನೆ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಲಾಗಿದೆ.

ಕಳೆದ ತಿಂಗಳು ಸುಡಾನ್‍ನಲ್ಲಿ ನಡೆದ ವಿಫಲ ಕ್ಷಿಪ್ರಕ್ರಾಂತಿಯೊಂದರ ನಂತರ ದೇಶದಲ್ಲಿ ಮಿಲಿಟರಿ ಮತ್ತು ನಾಗರಿಕ ಗುಂಪುಗಳ ನಡುವೆ ವೈಷಮ್ಯ ಹೆಚ್ಚಾಗಿತ್ತು. ದೇಶದ ದೀರ್ಘಕಾಲದ ನಾಯಕ ಓಮರ್ ಅಲ್-ಬಶೀರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ನಾಗರಿಕ ಗುಂಪುಗಳು ಹಾಗೂ ಮಿಲಿಟರಿ ನಡುವೆ ಸಂಘರ್ಷ ತಾರಕಕ್ಕೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News