ಉಗ್ರ ಚಟುವಟಿಕೆಗೆ ಹಣಕಾಸು ನೀಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳು ದೋಷಮುಕ್ತ

Update: 2021-10-25 12:43 GMT

ಹೊಸದಿಲ್ಲಿ: ವಾಸ್ತವಗಳ ಆಧರಿತವಲ್ಲದ ಊಹೆಗಳನ್ನು ಮಾಡುವುದು ಅಪಾಯಕಾರಿ ಎಂದು ಇತ್ತೀಚೆಗೆ ಉಗ್ರವಾದಕ್ಕೆ ಹಣಕಾಸು ಸಹಾಯ ನೀಡಿದ ಪ್ರಕರಣದಲ್ಲಿ ಆರೋಪಿಗಳಾದ ನಾಲ್ಕು ಮಂದಿಯನ್ನು ದೋಷಮುಕ್ತಗೊಳಿಸುವ ಸಂದರ್ಭ ದಿಲ್ಲಿಯ ನ್ಯಾಯಾಲಯ ಹೇಳಿದೆ. ಆರೋಪಿಗಳು ಹಾಗೂ ನಿಷೇಧಿತ ಉಗ್ರ ಸಂಘಟನೆಗಳ ಜತೆ ನಂಟು ಕಲ್ಪಿಸುವ ಸಂವಾದಗಳ ಸೀಡಿಯನ್ನು ಯಾರು ತಯಾರಿಸಿದ್ದರೆಂದು ಪತ್ತೆ ಹಚ್ಚಲು ಎನ್‍ಐಎ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದು indianexpress.com ವರದಿ ಮಾಡಿದೆ.

ಭಾರತದಲ್ಲಿ ಅಶಾಂತಿ ಹರಡಲು ಪಾಕಿಸ್ತಾನಿ ಉಗ್ರ ಸಂಘಟನೆ- ಫಲಾಹ್-ಇ-ಇನ್ಸಾಯಿತ್ ನಿಂದ ಹಣ ಪಡೆದಿದ್ದಾರೆಂಬ ಆರೋಪದ ಮೇಲೆ ಎನ್‍ಐ ಈ ಹಿಂದೆ ಮುಹಮ್ಮದ್ ಸಲ್ಮಾನ್, ಮುಹಮ್ಮದ್ ಸಲೀಂ, ಅರಿಫ್ ಗುಲಾಂ ಬಾಶಿರ್ ಧರಂಪುರಿಯಾ ಮತ್ತು ಮುಹಮ್ಮದ್ ಹುಸೈನ್ ಮೊಲಾನಿ ಎಂಬವರನ್ನು  ಬಂಧಿಸಿದ್ದರೆ, ನ್ಯಾಯಾಲಯ ಅಕ್ಟೋಬರ್ 21ರಂದು ಅವರನ್ನು ಖುಲಾಸೆಗೊಳಿಸಿತ್ತು. ಮಸೀದಿ ನಿರ್ಮಾಣದ ನೆಪದಲ್ಲಿ ಹಣ ನೀಡಲಾಗಿತ್ತು ಎಂದು ಎನ್‍ಐಎ ವಾದಿಸಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಲ್ಲೊಬ್ಬನಾದ ಕಮ್ರಾನ್‍ನ ಉದ್ಯೋಗಿ ಎನ್ನಲಾಗಿದ್ದ ಧರಂಪುರಿಯಾ ಎಂಬಾತನಿಂದ ವಶಪಡಿಸಿಕೊಳ್ಳಲಾಗಿದ್ದ ಸೀಡಿಯನ್ನು ಪ್ರಮುಖ ಸಾಕ್ಷ್ಯವನ್ನಾಗಿ ಎನ್‍ಐಎ ಬಳಸಿತ್ತು. ಅದರಲ್ಲಿ ಫಲಾಹ್ ಉಗ್ರ ಸಂಘಟನೆಯ ಉಪಮುಖ್ಯಸ್ಥ ಶಾಹಿದ್ ಮೆಹಮೂದ್ ಮತ್ತು ಕಮ್ರಾನ್ ನಡುವಿನ ಸಂಭಾಷಣೆಯಿದೆಯೆಂದೂ ಪ್ರಾಸಿಕ್ಯೂಶನ್ ವಾದಿಸಿತ್ತು.

ಆದರೆ ಈ ಸೀಡಿಯ ಮೂಲ, ಅದನ್ನು ಯಾರು ಸಿದ್ಧಪಡಿಸಿದ್ದರು ಎಂಬ ಮಾಹಿತಿಯನ್ನು ಎನ್‍ಐಎ ಒದಗಿಸಿಲ್ಲ ಹಾಗೂ ಈ ಸೀಡಿಯಲ್ಲಿನ ಸಂಭಾಷಣೆಯಲ್ಲಿ  ಯಾವುದೇ ಹಣಕಾಸು ಸಂಬಂಧಿತ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News