ಖಾದ್ಯ ತೈಲ ಬೆಲೆ ಏರಿಕೆ : ಕೇಂದ್ರಕ್ಕೆ ತಲೆನೋವು

Update: 2021-10-26 04:55 GMT
ಫೋಟೊ : PTI

ಹೊಸದಿಲ್ಲಿ: ಖಾದ್ಯ ತೈಲಗಳ ಆಮದು ಸುಂಕ ಮತ್ತು ಕೃಷಿ ಸೆಸ್‌ನಲ್ಲಿ ಗಣನೀಯ ಕಡಿತ ಮಾಡಿದ ಬಳಿಕವೂ ಖಾದ್ಯ ತೈಲಗಳ ಬೆಲೆ ಇಳಿಕೆಯಾಗದಿರುವುದು ಕೇಂದ್ರ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಬೆಲೆ ಏರಿಕೆ ತಡೆಗೆ ಇದೀಗ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮೇಲೆ ಕೇಂದ್ರ ನಿರೀಕ್ಷೆ ಹೊಂದಿದ್ದು, ಖಾದ್ಯ ತೈಲಗಳ ದಾಸ್ತಾನು ಮಿತಿಯನ್ನು ತ್ವರಿತವಾಗಿ ಹಾಗೂ ಕಟ್ಟುನಿಟ್ಟಾಗಿ ನಿಗದಿಪಡಿಸುವಂತೆ ಸೂಚಿಸಿದೆ.

ಇದುವರೆಗೆ ಉತ್ತರ ಪ್ರದೇಶ ಮಾತ್ರ ದಾಸ್ತಾನು ಮಿತಿಯನ್ನು ನಿಗದಿಪಡಿಸಿದ್ದು, ಹರ್ಯಾಣ, ಗುಜರಾತ್ ಮತ್ತು ರಾಜಸ್ಥಾನ ಮಿತಿ ನಿಗದಿಪಡಿಸುವ ನಿಟ್ಟಿನಲ್ಲಿ ಕಾರ್ಯ ಅಂತಿಮ ಹಂತದಲ್ಲಿದೆ.

ಇತರ ಒಂಬತ್ತು ರಾಜ್ಯಗಳು ಕೂಡಾ ಈಗಾಗಲೇ ದಾಸ್ತಾನು ಮಿತಿ ನಿಗದಿಪಡಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಅಕ್ರಮವಾಗಿ ದಾಸ್ತಾನು ಮಾಡುವುದನ್ನು ತಡೆಯುವ ಮೂಲಕ ಖಾದ್ಯ ತೈಲಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶವನ್ನು ಹೊಂದಿವೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳ ಜತೆ ಸೋಮವಾರ ಕೇಂದ್ರ ಆಹಾರ ಸಚಿವಾಲಯ ಪ್ರಗತಿ ಪರಿಶೀಲನಾ ಸಭೆ ನಡೆಸಿ, ದಾಸ್ತಾನು ಮಿತಿ ನಿಗದಿಪಡಿಸುವ ಕಾರ್ಯದ ಪ್ರಗತಿಯ ಪರಾಮರ್ಶೆ ನಡೆಸಿತು.

ಗ್ರಾಹಕ ವ್ಯವಹಾರಗಳ ಸಚಿವಾಲಯದಿಂದ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ, ಶೇಂಗಾ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಕ್ರಮವಾಗಿ ಪ್ರತಿ ಲೀಟರ್‌ಗೆ 182, 155 ಮತ್ತು 169 ರೂಪಾಯಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಬೆಲೆಗಳು ಒಂದು ತಿಂಗಳ ಹಿಂದೆ, ಅಂದರೆ ಖಾದ್ಯ ತೈಲಗಳ ಆಮದಿನ ಮೇಲೆ ವಿಧಿಸುತ್ತಿದ್ದ ಸುಂಕವನ್ನು ಇಳಿಸುವ ಮುನ್ನ ಇದ್ದ ಮಟ್ಟದಲ್ಲೇ ಇವೆ. ಒಂದು ತಿಂಗಳ ಹಿಂದೆ ಇದ್ದ ಸಾಸಿವೆ ಎಣ್ಣೆ ದರ ಲೀಟರ್‌ಗೆ 183 ರೂಪಾಯಿಗಳಿಂದ 185 ರೂಪಾಯಿಗೆ ಹೆಚ್ಚಿದೆ. ತಾಳೆ ಎಣ್ಣೆ ಮಾರಾಟ ದರ ಕೆಜಿಗೆ 133 ರೂಪಾಯಿ ಆಗಿದ್ದು, ಕಳೆದ ತಿಂಗಳಲ್ಲಿ 2 ರೂಪಾಯಿ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News