ಸಮೀರ್ ವಾಂಖೆಡೆ 26 ಪ್ರಕರಣಗಳಲ್ಲಿ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ: ನವಾಬ್ ಮಲಿಕ್ ಆರೋಪ

Update: 2021-10-26 07:05 GMT

ಮುಂಬೈ/ಹೊಸದಿಲ್ಲಿ: ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಒಳಗೊಂಡ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ  ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ  ವಿರುದ್ಧ ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಇಂದು ಬೆಳಿಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

ಪ್ರಕರಣದ ಸ್ವತಂತ್ರ ಸಾಕ್ಷಿಯೊಬ್ಬರು ಎನ್ ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ದ ಲಂಚದ ಆರೋಪ ಹೊರಿಸಿದ ಕೆಲವು ದಿನಗಳ ಬಳಿಕ  ಮಲಿಕ್ ಇಂದು  ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಪ್ರಮುಖ ಅಧಿಕಾರಿ ಸಮೀರ್  "26 ಪ್ರಕರಣಗಳಲ್ಲಿ ಸರಿಯಾದ ನಿಯಮಗಳನ್ನು ಅನುಸರಿಸಿಲ್ಲ" ಎಂದು ಆರೋಪಿಸಿದರು.

ಎರಡು ವರ್ಷಗಳಿಂದ ಎನ್ ಸಿಬಿಯೊಂದಿಗೆ ಕೆಲಸ ಮಾಡುತ್ತಿರುವ  ಉದ್ಯೋಗಿಯೊಬ್ಬರ ಪತ್ರವನ್ನು ಉಲ್ಲೇಖಿಸಿದ ಎನ್‌ಸಿಪಿ ನಾಯಕ "ಹೆಸರು ಹೇಳಲಿಚ್ಛಿಸದ ಎನ್‌ಸಿಬಿ ಅಧಿಕಾರಿಯಿಂದ ನಾನು ಪತ್ರ ಸ್ವೀಕರಿಸಿದ್ದೇನೆ. ನಾನು ಈ ಪತ್ರವನ್ನು ನಾರ್ಕೋಟಿಕ್ಸ್ ಮಹಾನಿರ್ದೇಶಕರಿಗೆ ಕಳುಹಿಸುತ್ತಿದ್ದೇನೆ. ಎನ್‌ಸಿಬಿಯ ಸಮೀರ್ ವಾಂಖೆಡೆ  ನಡೆಸುತ್ತಿರುವ ತನಿಖೆಯಲ್ಲಿ ಈ ಪತ್ರವನ್ನು ಸೇರಿಸಲು ವಿನಂತಿಸುತ್ತೇನೆ. ಇದರ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ" ಎಂದು ಮಲಿಕ್ ಹೇಳಿದರು.

"ನನ್ನ ಯುದ್ಧ ಏಜೆನ್ಸಿ ವಿರುದ್ಧ ಅಲ್ಲ... ನಾನು ಅನ್ಯಾಯದ ವಿರುದ್ಧ ಹೋರಾಡುತ್ತಿದ್ದೇನೆ. ನಾನು ವಂಚನೆಯಿಂದ ಕೆಲಸ ಪಡೆದ ಒಬ್ಬ ಅಧಿಕಾರಿಯನ್ನು ಮಾತ್ರ ಬಹಿರಂಗಪಡಿಸುತ್ತಿದ್ದೇನೆ. ವಾಂಖೆಡೆ ಎನ್‌ಸಿಬಿ ಉದ್ಯೋಗ ಪಡೆಯಲು ನಕಲಿ ಜನನ ಪ್ರಮಾಣಪತ್ರವನ್ನು ಬಳಸಿದ್ದಾರೆ. ಥಾಣೆ ಹಾಗೂ ಮುಂಬೈನಲ್ಲಿ ಅವರು ಅಕ್ರಮವಾಗಿ ಕೆಲವರ ಫೋನ್ ಕದ್ದಾಲಿಸುತ್ತಿದ್ದಾರೆ"  ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

"26 ಪ್ರಕರಣಗಳಲ್ಲಿ ಸಮೀರ್ ವಾಂಖೆಡೆ ಅವರು ತನಿಖೆ ನಡೆಸುವಾಗ ಸರಿಯಾದ ನಿಯಮಗಳನ್ನು ಅನುಸರಿಸದಿರುವ ಬಗ್ಗೆ ನಾನು  ಸ್ವೀಕರಿಸಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ" ಎಂದು ಮಲಿಕ್ ಹೇಳಿದರು.

ಸಮೀರ್ ವಾಂಖೆಡೆ ವಿರುದ್ಧ ಫೋನ್ ಕದ್ದಾಲಿಕೆ ಆರೋಪ

ಮುಂಬೈ ಮತ್ತು ಥಾಣೆಯಲ್ಲಿ ಇಬ್ಬರು ವ್ಯಕ್ತಿಗಳ ಮೂಲಕ ಸಮೀರ್ ವಾಂಖೆಡೆ ಕೆಲವರ ಮೊಬೈಲ್ ಫೋನ್‌ಗಳನ್ನು ಅಕ್ರಮವಾಗಿ ಕದ್ದಾಲಿಸುತ್ತಿದ್ದಾರೆ. ವಾಂಖೆಡೆ ಅವರು ತಮ್ಮ ಕುಟುಂಬದ ಸದಸ್ಯರ ಕರೆ ವಿವರಗಳ ದಾಖಲೆಯನ್ನು (ಸಿಡಿಆರ್) ಪೊಲೀಸರಿಂದ ಕೇಳಿದ್ದರು ಎಂದು ಮಲಿಕ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News