ಏಕೆ ಕೇವಲ 23 ಪ್ರತ್ಯಕ್ಷದರ್ಶಿಗಳನ್ನು ಗುರುತಿಸಿದ್ದೀರಿ?: ಉ.ಪ್ರ. ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

Update: 2021-10-26 07:08 GMT

ಹೊಸದಿಲ್ಲಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಆರೋಪಿಯಾಗಿರುವ ಲಖಿಂಪುರ ಖೇರಿ ರೈತರ ಹತ್ಯೆ ಪ್ರಕರಣದಲ್ಲಿ ಈತನಕ ಏಕೆ ಕೇವಲ 23 ಪ್ರತ್ಯಕ್ಷದರ್ಶಿಗಳನ್ನು ಗುರುತಿಸಿದ್ದೀರಿ ಎಂದು ಮಂಗಳವಾರ ಪ್ರಶ್ನಿಸಿರುವ ಸುಪ್ರೀಂಕೋರ್ಟ್ ಹೆಚ್ಚಿನ ಸಾಕ್ಷಿಗಳನ್ನು ಸಂಗ್ರಹಿಸಿ ಅವರಿಗೆ ಸಂಪೂರ್ಣ ರಕ್ಷಣೆ ಒದಗಿಸಬೇಕೆಂದು  ಉತ್ತರ ಪ್ರದೇಶ ಸರಕಾರಕ್ಕೆ ಆದೇಶಿಸಿದೆ.

ಸುಪ್ರೀಂ ಕೋರ್ಟ್  ತನ್ನ ಆದೇಶದಲ್ಲಿ, "ಸಾಕ್ಷಿಗಳಿಗೆ ರಕ್ಷಣೆ ನೀಡುವಂತೆ" ರಾಜ್ಯ ಸರಕಾರಕ್ಕೆ ಆದೇಶಿಸಿದೆ ಹಾಗೂ ಹೆಚ್ಚಿನ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲು ನಿರ್ದೇಶಿಸಿದೆ.

"ಹೇಳಿಕೆಗಳನ್ನು ದಾಖಲಿಸುವಲ್ಲಿ ಯಾವುದೇ ತೊಂದರೆ ಹಾಗೂ  ನ್ಯಾಯಾಂಗ ಅಧಿಕಾರಿಗಳ ಅಲಭ್ಯತೆ ಇದ್ದರೆ, ನಂತರ ಹತ್ತಿರದ ಜಿಲ್ಲಾ ನ್ಯಾಯಾಧೀಶರು ಪರ್ಯಾಯದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು" ಎಂದು ನ್ಯಾಯಾಲಯ ಹೇಳಿದೆ.

ಉತ್ತರ ಪ್ರದೇಶ ಸರಕಾರದಿಂದ ಹೆಚ್ಚಿನ ಸಾಕ್ಷಿಗಳನ್ನು ಏಕೆ ಪ್ರಶ್ನಿಸಿಲ್ಲ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. 44 ಸಾಕ್ಷಿಗಳ ಪೈಕಿ ಇದುವರೆಗೆ ನಾಲ್ವರು ಸಾಕ್ಷಿಗಳ ಹೇಳಿಕೆಯನ್ನು ಮಾತ್ರ ದಾಖಲಿಸಿರುವಿರಿ. ಏಕೆ ಹೆಚ್ಚಿನ ಸಾಕ್ಷಿಗಳ ಹೇಳಿಕೆ ದಾಖಲಿಸಿಲ್ಲ ? ಎಂದು ಮುಖ್ಯ ನ್ಯಾಯಮೂರ್ತಿ ರಮಣ ಪ್ರಶ್ನಿಸಿದರು.

ಎಲ್ಲಾ ಸಾಕ್ಷಿಗಳ ಹೇಳಿಕೆಯನ್ನು ರಕ್ಷಿಸಲು ಹಾಗೂ  ದಾಖಲಿಸಲು ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ಆದೇಶ ನೀಡಿತು ಹಾಗೂ "ಇದು ಕೊನೆಯಿಲ್ಲದ ಕಥೆಯಾಗಬಾರದು" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News