ಶಾರೂಖ್ ಮ್ಯಾನೇಜರ್ ಜೊತೆ 25ಕೋಟಿ ರೂ. ಬೇಡಿಕೆಯಿರಿಸಿ 18ಕೋಟಿ ರೂ.ಗೆ 'ಸೆಟ್ಲ್' ಮಾಡಲುದ್ದೇಶಿಸಿದ್ದ ಗೋಸಾವಿ !

Update: 2021-10-26 09:54 GMT

ಮುಂಬೈ: ನಟ ಶಾರುಖ್ ಖಾನ್ ಅವರ ಮ್ಯಾನೇಜರ್ ಅವರ ಮುಂದೆ ರೂ. 25 ಕೋಟಿಗೆ ಬೇಡಿಕೆಯಿರಿಸಲು ಆರ್ಯನ್ ಖಾನ್ ಜತೆಗೆ ವೈರಲ್ ಸೆಲ್ಫಿಯಲ್ಲಿ ಕಾಣಿಸಿಕೊಂಡಿದ್ದ 'ಖಾಸಗಿ ತನಿಖಾಕಾರ' ಕಿರಣ್ ಪಿ ಗೋಸಾವಿ ಉದ್ದೇಶಿಸಿದ್ದರೆಂಬ ಸ್ಫೋಟಕ ಮಾಹಿತಿಯನ್ನು ಆರ್ಯನ್ ಖಾನ್ ಪ್ರಕರಣದ ಸಾಕ್ಷಿಯಾಗಿರುವ ಪ್ರಭಾಕರ್ ಸೈಲ್ ಆರೋಪಿಸಿದ್ದಾರೆ. ತನ್ನನ್ನು ಗೋಸಾವಿ ಯ ಬಾಡಿಗಾರ್ಡ್ ಎಂದು ಪರಿಚಯಿಸಿಕೊಳ್ಳುವ ಪ್ರಭಾಕರ್ ಸೈಲ್, ತಮ್ಮ ಜೀವ ಅಪಾಯದಲ್ಲಿದೆ ಎಂದು ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.

ಶಾರುಖ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಅವರ ಮುಂದೆ ರೂ. 25 ಕೋಟಿಗೆ ಬೇಡಿಕೆಯಿರಿಸಿ ಕೊನೆಗೆ ರೂ. 18 ಕೋಟಿಗೆ ಸೆಟ್ಲ್ ಮಾಡಲು ಗೋಸಾವಿ ಉದ್ದೇಶಿಸಿದ್ದರು, ಈ ಹಣದಿಂದ ರೂ. 8 ಕೋಟಿಯನ್ನು ಎನ್‍ಸಿಬಿ ವಲಯ ನಿರ್ದೇಶಕರಾದ ಸಮೀರ್ ವಾಂಖೇಡೆಗೆ ನೀಡಲಿತ್ತು, ಎಂದೂ ಸೈಲ್ ಹೇಳಿದ್ದಾರೆ.

ಕ್ರೂಸ್ ಹಡಗಿನ ಮೇಲೆ ದಾಳಿ ನಡೆದು ಆರ್ಯನ್ ಖಾನ್ ಮತ್ತಿತರರನ್ನು ಬಂಧಿಸಿದ ನಂತರ ವಾಂಖೇಡೆ ಸಹಿತ ಎನ್‍ಸಿಬಿ ಅಧಿಕಾರಿಗಳು ಅಕ್ಟೋಬರ್ 3ರ ಮುಂಜಾನೆ ತನಗೆ ಖಾಲಿ ಕಾಗದಗಳಿಗೆ ಸಹಿ ಹಾಕುವಂತೆ ಹೇಳಿದ್ದರು ಎಂದೂ ಸೈಲ್ ಹೇಳಿಕೊಂಡಿದ್ದಾರೆ.

"ನಾನೊಬ್ಬ ಸಾಕ್ಷಿ ಎಂದು ನನಗೆ ತಿಳಿದಿರಲಿಲ್ಲ. ಒಳಗೆ ಬಂದು ಕಾಗದಗಳಲ್ಲಿ ಸಹಿ ಹಾಕುವಂತೆ ಹೇಳಿದಾಗ ನಾನು ಎನ್‍ಸಿಬಿ ಕಚೇರಿಗೆ ಹೋದೆ. ಖಾಲಿ ಹಾಳೆಗಳಿಗೆ ಸಹಿ ಹಾಕಲು ನಾನು ವಿರೋಧಿಸಿದಾಗ, ಸಹಿ ಹಾಕಿ ಏನಾಗುವುದಿಲ್ಲ ಎಂದು ವಾಂಖೇಡೆ ಹೇಳಿದರು. ಕಿರಣ್ ಗೋಸಾವಿ ಕೂಡ ನನಗೆ ಸಹಿ ಹಾಕುವಂತೆ ಸೂಚಿಸಿದರು. ಅಲ್ಲಿ ಹಲವು ಅಧಿಕಾರಿಗಳಿದ್ದರು. ನಾನು ಹೇಗೆ ಅವರ ಜತೆ ಜಗಳವಾಡಬಹುದಾಗಿತ್ತು?,'' ಎಂದು ಸೈಲ್ ಪ್ರಶ್ನಿಸಿದ್ದಾರೆ.

ಕನಿಷ್ಠ 9 ಖಾಲೆ ಹಾಳೆಗಳಿಗೆ ನನ್ನ ಸಹಿ ಪಡೆದುಕೊಂಡಿದ್ದಾರೆ, ಆಧಾರ್ ಕಾರ್ಡಿನ ಪ್ರತಿಯನ್ನೂ ಪಡೆದುಕೊಂಡಿದ್ದಾರೆ, ಹಾಳೆಗಳಿಗೆ ಸಹಿ ಹಾಕಿದ ನಂತರವಷ್ಟೇ ಆರ್ಯನ್ ಖಾನ್ ಅವರನ್ನು ನೋಡಿದೆ. ಎನ್‍ಸಿಬಿ ಕಚೇರಿಯಲ್ಲಿ ಗೋಸಾವಿ ಅವರು ಆರ್ಯನ್ ಪಕ್ಕದಲ್ಲಿ ಕುಳಿತುಕೊಂಡ ಸಂದರ್ಭದ ವೀಡಿಯೋವನ್ನು ನಾನೇ ತೆಗೆದಿದ್ದು,'' ಎಂದು ಸೈಲ್ ಹೇಳಿದ್ದಾರೆ.

ಗೋಸಾವಿ, ಸ್ಯಾಮ್ ಡಿ'ಸೋಜಾ ಹಾಗೂ ಶಾರುಖ್ ಖಾನ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಒಂದು 'ಡೀಲ್'ಗೆ ಬರಲು ಕಾರಿನೊಳಗಡೆ ಮಾತುಕತೆ ನಡೆಸಿದ್ದರು. ಪೂಜಾ ಸಾಕಷ್ಟು ಖ್ಯಾತಿ ಹೊಂದಿದ್ದಾರೆ. ಆಕೆಯನ್ನು ನೋಡಿದ ನಂತರ ಆಕೆಯ ಹೆಸರು ಗೂಗಲ್ ಸರ್ಚ್ ಮಾಡಿದ್ದೆ,'' ಎಂದೂ ಅವರು ಹೇಳಿದ್ದಾರೆ.

ಗೋಸಾವಿ ಅವರು ಫೋನ್‍ನಲ್ಲಿ, ಸ್ಯಾಮ್ ಜತೆಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡಿದ್ದೆ. "ನಾವು ಎಸ್‍ಆರ್ ಕೆ ಮ್ಯಾನೇಜರ್ ಅವರಿಂದ ರೂ. 25 ಕೋಟಿಗೆ ಬೇಡಿಕೆಯಿರಿಸಬೇಕು, ರೂ. 18 ಕೋಟಿಗೆ ಸೆಟ್ಲ್ ಮಾಡಬೇಕು ಹಾಗೂ ರೂ 8 ಕೋಟಿ ವಾಂಖೇಡೆಗೆ ನೀಡಿ ಉಳಿದಿದ್ದನ್ನು ಹಂಚಿಕೊಳ್ಳಬೇಕು,'' ಎಂದಿದ್ದಾರೆ.

ದಾಳಿ ನಡೆದ ಮರುದಿನ ಅಕ್ಟೋಬರ್ 3ರಂದ ಮಹಾಲಕ್ಷಿ ಪ್ರದೇಶದಿಂದ ರೂ. 50 ಲಕ್ಷ ಸಂಗ್ರಹಿಸುವಂತೆ ಸೂಚಿಸಲಾಯಿತು, ಅಲ್ಲಿಗೆ ತೆರಳಿದಾಗ ಇಬ್ಬರು ವ್ಯಕ್ತಿಗಳು ಒಂದು ಚೀಲ ನೀಡಿದರು. ಅದನ್ನು ಗೋಸಾವಿ ಮತ್ತವರ ಪತ್ನಿಗೆ ನೀಡಿದ ನಂತರ ಅವರು ತೆರಳಿದರು. ಆತ ನನಗೆ ವೇತನ ನೀಡಿಲ್ಲ, ಮಕ್ಕಳ ಶಾಲಾ ಶುಲ್ಕಕ್ಕೆಂದು ನೀಡಿದ ಚೆಕ್ ಕೂಡ ಬೌನ್ಸ್ ಆಗಿದೆ, ಗೋಸಾವಿಯನ್ನು ಅಕ್ಟೋಬರ್ 7ರಂದು ಕೊನೆಯ ಬಾರಿ ನೋಡಿದ್ದೆ, ಅಕ್ಟೋಬರ್ 21ರಂದು ಅವರು ಕರೆ ಮಾಡಿ ಶೀಘ್ರ ಶರಣಾಗುವುದಾಗಿ ಹೇಳಿದ್ದರು,'' ಎಂದು ಸೈಲ್ ಹೇಳಿದ್ದಾರೆ.

ತಮ್ಮ ಬಳಿ ಇನ್ನಷ್ಟು ಸಾಕ್ಷ್ಯಗಳಿವೆ, ಅವುಗಳನ್ನು ಶೀಘ್ರ ಮುಂದಿಡುವುದಾಗಿಯೂ ಹೇಳಿದ ಸೈಲ್ "ನಾನು ಪ್ರಾಮಾಣಿಕ ಆದರೆ ಯಾರೂ ನನ್ನನ್ನು ಬೆಂಬಲಿಸುತ್ತಿಲ್ಲ, ಅದಕ್ಕೆ ರಕ್ಷಣೆ ಕೋರಿದ್ದೇನೆ,'' ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News