ಕಾಂಗ್ರೆಸ್‌ನಲ್ಲಿ ಶಿಸ್ತು,ಒಗ್ಗಟ್ಟು ಬೇಕು:ಪಕ್ಷದ ನಾಯಕರಿಗೆ ಸೋನಿಯಾ ಗಾಂಧಿ ಕರೆ

Update: 2021-10-26 08:03 GMT

ಹೊಸದಿಲ್ಲಿ:  ಪಕ್ಷದ ನಾಯಕರನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಹೋರಾಡಲು ಪಕ್ಷದಲ್ಲಿ "ಶಿಸ್ತು ಮತ್ತು ಒಗ್ಗಟ್ಟಿನ ಅತ್ಯಗತ್ಯವಾಗಿ ಬೇಕು" ಎಂದು ಕರೆ ನೀಡಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು, ರಾಜ್ಯಾಧ್ಯಕ್ಷರು ಹಾಗೂ  ಇತರ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, “ನಾವು ಬಿಜೆಪಿ/ಆರ್‌ಎಸ್‌ಎಸ್‌ನ ಪೈಶಾಚಿಕ ಅಭಿಯಾನವನ್ನು ಸೈದ್ಧಾಂತಿಕವಾಗಿ ಹೋರಾಡಬೇಕು. ನಾವು ಈ ಯುದ್ಧವನ್ನು ಗೆಲ್ಲಬೇಕಾದರೆ ದೃಢವಿಶ್ವಾಸದಿಂದ ಹಾಗೆ ಮಾಡಬೇಕು ಹಾಗೂ  ಜನರ ಮುಂದೆ ಅವರ ಸುಳ್ಳುಗಳನ್ನು ಬಹಿರಂಗಪಡಿಸಬೇಕು’’ ಎಂದರು.

“ರಾಷ್ಟ್ರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಎಐಸಿಸಿ ಪ್ರತಿದಿನವೂ ಪ್ರಮುಖ ಮತ್ತು ವಿವರವಾದ ಹೇಳಿಕೆಗಳನ್ನು ಬಿಡುಗಡೆ ಮಾಡುತ್ತದೆ. ಆದರೆ ಅದು ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ನಮ್ಮ ತಳಮಟ್ಟದ ಕಾರ್ಯಕರ್ತರಿಗೆ ತಲುಪುತ್ತಿಲ್ಲ ಎಂಬುದು ನನ್ನ ಅನುಭವ. ನಮ್ಮ ರಾಜ್ಯ ಮಟ್ಟದ ನಾಯಕರಲ್ಲಿಯೂ ಕೂಡ  ಸ್ಪಷ್ಟತೆ ಮತ್ತು ಒಗ್ಗಟ್ಟು ಕೊರತೆಯನ್ನು ನಾನು ಕಂಡುಕೊಂಡಿದ್ದೇನೆ’’  ಎಂದು ಸೋನಿಯಾ ಗಾಂಧಿ ಹೇಳಿದರು.

ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಬಂಡಾಯ ಮತ್ತು ಆಂತರಿಕ ಬಿಕ್ಕಟ್ಟಿನಿಂದ ಹೋರಾಡುತ್ತಿರುವ ಸಮಯದಲ್ಲಿ ಸೋನಿಯಾ ಅವರು ಪಕ್ಷದಲ್ಲಿ ಶಿಸ್ತು ಮತ್ತು ಏಕತೆಗೆ ಕರೆ ನೀಡಿದರು.

"ನಾನು ಶಿಸ್ತು ಮತ್ತು ಏಕತೆಯ ಅತ್ಯುನ್ನತ ಅಗತ್ಯವನ್ನು ಮತ್ತೊಮ್ಮೆ ಒತ್ತಿಹೇಳಲು ಬಯಸುತ್ತೇನೆ. ನಮ್ಮಲ್ಲಿ ಪ್ರತಿಯೊಬ್ಬರಿಗೂ ಮುಖ್ಯವಾಗಬೇಕಾಗಿರುವುದು ಸಂಘಟನೆಯ ಬಲವರ್ಧನೆ. ಇದು ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಅತಿಕ್ರಮಿಸಬೇಕು. ಇದರಲ್ಲಿ ಸಾಮೂಹಿಕ ಮತ್ತು ವೈಯಕ್ತಿಕ ಯಶಸ್ಸು ಅಡಗಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News