ಮುಂಬೈ ಡ್ರಗ್ಸ್ ದಾಳಿಯ ದಿನದಂದು ಗೋಸಾವಿಯೊಂದಿಗಿದ್ದ ಸಮೀರ್ ವಾಂಖೆಡೆ ಅವರ ಫೋಟೊ ಬಹಿರಂಗ

Update: 2021-10-26 09:56 GMT

ಮುಂಬೈ: ಮುಂಬೈ ಕರಾವಳಿಯಲ್ಲಿ ಅ. 3 ರಂದು ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿದ ನಂತರ ಖಾಸಗಿ ತನಿಖಾಧಿಕಾರಿ, ಇದೀಗ ತಲೆ ಮರೆಸಿಕೊಂಡಿರುವ ಎನ್ ಸಿಬಿಯ ಸ್ವತಂತ್ರ ಸಾಕ್ಷಿದಾರ ಕೆ.ಪಿ. ಗೋಸಾವಿ ಅವರೊಂದಿಗೆ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಕಾಣಿಸಿಕೊಂಡಿರುವ ಹಲವಾರು ಚಿತ್ರಗಳು ಬಹಿರಂಗವಾಗಿವೆ. ಗೋಸಾವಿ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಅವರೊಂದಿಗೆ ತೆಗೆದುಕೊಂಡಿರುವ ಸೆಲ್ಫಿ ಈಗಾಗಲೇ ವೈರಲ್ ಆಗಿತ್ತು.

ಸಮೀರ್ ವಾಂಖೆಡೆ ಹಾಗೂ  ಕೆ.ಪಿ. ಗೋಸಾವಿ ಅವರು  ಪ್ರಕರಣದಲ್ಲಿ ಬಂಧಿತರ ಜೊತೆಗೆ ಕೋಣೆಯೊಂದರಲ್ಲಿ ಇರುವುದು ಚಿತ್ರದಲ್ಲಿ ಕಂಡುಬಂದಿದೆ. 

ಕೆ.ಪಿ. ಗೋಸಾವಿ ಹಾಗೂ  ಅವರ ವೈಯಕ್ತಿಕ ಅಂಗರಕ್ಷಕ ಪ್ರಭಾಕರ ಸೈಲ್ ನಡುವಿನ ವ್ಯಾಟ್ಸ್ ಆ್ಯಪ್ ಚಾಟ್ ಕೂಡ ಬಹಿರಂಗವಾಗಿದೆ.

"ಹಾಜಿ ಅಲಿಗೆ ಹೋಗು. ನಾನು ಹೇಳಿದ ಕೆಲಸವನ್ನು ಮುಗಿಸಿ. ಮನೆಗೆ ಹಿಂತಿರುಗು. ಬಾಗಿಲು ಬೀಗ ಹಾಕಿ ಕಿಟಕಿಯಿಂದ ಹಾಲ್ ಒಳಗೆ ಕೀಲಿಯನ್ನು ಎಸೆ" ಎಂದು ಕೆ.ಪಿ.ಗೋಸಾವಿ ಅಕ್ಟೋಬರ್ 3 ರ ಚಾಟಿಂಗ್ ನಲ್ಲಿ  ಪ್ರಭಾಕರ ಸೈಲ್‌ಗೆ ಹೇಳುತ್ತಾರೆ.

"ಕ್ರೂಸ್ ಡ್ರಗ್ಸ್ ಪ್ರಕರಣದ ಸಾಕ್ಷಿಯೂ ಆಗಿರುವ ಪ್ರಭಾಕರ್ ಸೈಲ್, ಆರ್ಯನ್ ಅವರನ್ನು ತನಿಖೆಯಿಂದ ಕೈಬಿಡಲು ಗೋಸಾವಿ ಹಾಗೂ  ಸ್ಯಾಮ್ ಡಿಸೋಜಾ ಅವರು 25 ಕೋಟಿ ರೂ. ಬೇಡಿಕೆ ಇಡುವ ಕುರಿತು ಮಾತನಾಡಿದ್ದನ್ನು ನಾನು ಕೇಳಿದ್ದೇನೆ.  ಶಾರುಖ್ ಅವರ ಮ್ಯಾನೇಜರ್ ಪೂಜಾ ದಡ್ಲಾನಿ ಅವರ ಮುಂದೆ ರೂ. 25 ಕೋಟಿಗೆ ಬೇಡಿಕೆಯಿರಿಸಿ ಕೊನೆಗೆ ರೂ. 18 ಕೋಟಿಗೆ ಸೆಟ್ಲ್ ಮಾಡಲು ಗೋಸಾವಿ ಉದ್ದೇಶಿಸಿದ್ದರು, ಈ ಹಣದಿಂದ ರೂ. 8 ಕೋಟಿಯನ್ನು ಎನ್‍ಸಿಬಿ ವಲಯ ನಿರ್ದೇಶಕರಾದ ಸಮೀರ್ ವಾಂಖೇಡೆಗೆ ನೀಡಲಿತ್ತು, " ಎಂದು ಸೈಲ್ ಆರೋಪಿಸಿದ್ದಾರೆ. ಸೈಲ್ ಮಾಡಿದ ಸುಲಿಗೆಯ ಆರೋಪವನ್ನು  ಗೋಸಾವಿ ನಿರಾಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News