ಮಧ್ಯಪ್ರದೇಶ ಬಿಜೆಪಿ ಸಚಿವನ ಎಚ್ಚರಿಕೆಯ ಬಳಿಕ ʼಸಲಿಂಗಿ ಜೋಡಿʼಯ ಜಾಹೀರಾತು ವಾಪಸ್ ಪಡೆದ ಡಾಬರ್

Update: 2021-10-26 09:22 GMT

ಹೊಸದಿಲ್ಲಿ: ಇಬ್ಬರು ಯುವತಿಯರು ಜತೆಯಾಗಿ ಕರ್ವಾ ಚೌತ್ ಆಚರಿಸುತ್ತಿರುವುದನ್ನು ಡಾಬರ್ ಸಂಸ್ಥೆ ತನ್ನ ಫೆಮ್ ಉತ್ಪನ್ನದ ಜಾಹೀರಾತಿನ ಭಾಗವಾಗಿ ತೋರಿಸಿರುವುದನ್ನು ಖಂಡಿಸಿ ಉತ್ತರ ಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯ ನಂತರ ಡಾಬರ್ ತನ್ನ ಜಾಹೀರಾತನ್ನು ವಾಪಸ್ ಪಡೆದುಕೊಂಡಿದೆ.

ʼಸಲಿಂಗಿ ಜೋಡಿ ಕರ್ವಾ ಚೌತ್ ಆಚರಿಸುವುದನ್ನು ತೋರಿಸಿದ್ದಕ್ಕೆʼ ಡಾಬರ್ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ಸಚಿವ "ಭವಿಷ್ಯದಲ್ಲಿ ಅವರು ಇಬ್ಬರು ಪುರುಷರು  ವಿವಾಹವಾಗುವುದನ್ನೂ ತೋರಿಸುತ್ತಾರೆ" ಎಂದಿದ್ದರಲ್ಲದೆ ಜಾಹೀರಾತು ವಾಪಸ್ ಪಡೆಯುವಂತೆ ಕಂಪನಿಗೆ ಸೂಚಿಸುಂತೆ ಪೊಲೀಸರಿಗೆ ಆದೇಶಿಸಲಾಗಿದೆ ಎಂದಿದ್ದರು. 

"ಕಂಪೆನಿ  ಆದೇಶ ಪಾಲಿಸಲು ವಿಫಲವಾದರೆ ಕಾನೂನು ಕ್ರಮದ ಕೈಗೊಳ್ಳಲಾಗುವುದು" ಎಂದೂ ಅವರು ಎಚ್ಚರಿಸಿದ್ದರು.

ಆದರೆ ಡಾಬರ್ ಜಾಹೀರಾತನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸಿಸಿದ್ದರೆ, ಇನ್ನು ಕೆಲವರು ಅದನ್ನು ಟೀಕಿಸಿ ಇಂತಹುದೇ ಜಾಹೀರಾತನ್ನು ಸಂಸ್ಥೆ ಕ್ರಿಸ್ಮಸ್, ಈದ್ ಅಥವಾ ಬೇರೆ ಹಬ್ಬಕ್ಕೆ ಏಕೆ ಹೊರತರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಫ್ಯಾಬ್ ಇಂಡಿಯಾ ಸಂಸ್ಥೆ ಕೂಡ ತನ್ನ ಜಾಹೀರಾತೊಂದನ್ನು  ಆನ್ಲೈನ್ ನಿಂದನೆ ಹಾಗೂ ಬಿಜೆಪಿ ನಾಯಕರ ಟೀಕೆಗಳ ಹಿನ್ನೆಲೆಯಲ್ಲಿ ವಾಪಸ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News