5 ಮಿಲಿಯನ್ ಡಾಲರ್ ಇನ್ಶೂರೆನ್ಸ್ ಹಣ ಪಡೆಯಲು ತನ್ನದೇ ಸಾವಿನ ನಾಟಕವಾಡಿ ವ್ಯಕ್ತಿಯನ್ನು ಕೊಂದ ಪುಣೆಯ ವ್ಯಕ್ತಿ

Update: 2021-10-26 11:09 GMT

ಪುಣೆ: ತಾನು ಅಮೆರಿಕಾದ ಕಂಪೆನಿಯೊಂದರಿಂದ ತೆಗೆದುಕೊಂಡಿದ್ದ 5 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು ರೂ 37.5 ಕೋಟಿ) ಜೀವವಿಮಾ ಮೊತ್ತವನ್ನು ಬದುಕಿರುವಾಗಲೇ ತನ್ನದಾಗಿಸಲು ಮಹಾರಾಷ್ಟ್ರದ ಅಹ್ಮದ್‍ನಗರ್ ಜಿಲ್ಲೆಯ 54 ವರ್ಷದ ವ್ಯಕ್ತಿಯೊಬ್ಬ ತನ್ನದೇ ಅಂಗಸೌಷ್ಠವ ಹೊಂದಿದ್ದ ನಿರ್ಗತಿಕ ವ್ಯಕ್ತಿಗೆ ನಾಗರಹಾವು ಕಡಿಯುವಂತೆ ಮಾಡಿ ಸಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯನ್ನು ಪ್ರಭಾಕರ್ ಭೀಮಾಜಿ ವಾಗ್ಚೌರೆ ಎಂದು ಗುರುತಿಸಲಾಗಿದೆ. ಈತನ ವಿಮಾ ಕಂಪೆನಿ ಆತನ `ಸಾವಿನ' ಕುರಿತು ಪರಿಶೀಲಿಸಲು ಅಧಿಕಾರಿಗಳನ್ನು ಕಳಿಸಿದಾಗ ಈತನ ವಂಚನೆ ಬಯಲಾಗಿತ್ತು. ಸದ್ಯ ಪ್ರಭಾಕರ್ ಹಾಗೂ ಆತನಿಗೆ ಸಹಾಯ ಮಾಡಿದ ನಾಲ್ಕು ಮಂದಿ ಜೈಲುಗಂಬಿ ಎಣಿಸುತ್ತಿದ್ದಾರೆ.

ಕಳೆದ 20 ವರ್ಷಗಳಿಂದ ಅಮೆರಿಕಾದಲ್ಲಿ ವಾಸಿಸುತ್ತಿದ್ದ ಪ್ರಭಾಕರ್ ಈ ವರ್ಷದ ಜನವರಿಯಲ್ಲಿ ಭಾರತಕ್ಕೆ ವಾಪಸಾಗಿ ಅಹ್ಮದ್‍ನಗರದ ರಜೂರು ಗ್ರಾಮದಲ್ಲಿ ವಾಸವಾಗಿದ್ದ.

ಆತ ಎಪ್ರಿಲ್ 22ರಂದು ಸಾವಿಗೀಡಾಗಿದ್ದ ಎಂಬ ಮಾಹಿತಿ ರಜೂರು ಪೊಲೀಸ್ ಠಾಣೆಗೆ ದೊರಕಿತ್ತು. ಆತನ ಸೋದರಳಿಯ ಎಂದು ಹೇಳಿಕೊಂಡ ವ್ಯಕ್ತಿ ಹಾಗೂ ಗ್ರಾಮದ ಇನ್ನೊಬ್ಬ ವ್ಯಕ್ತಿ ಆತನ ಮೃತದೇಹವನ್ನು ಗುರುತಿಸಿದ್ದರಲ್ಲದೆ ಆತ ಹಾವಿನ ಕಡಿತದಿಂದ ಸಾವನ್ನಪ್ಪಿದ್ದ ಎಂಬ ವರದಿಯೂ ಆಸ್ಪತ್ರೆಯಿಂದ ದೊರಕಿತ್ತು. ಸೋದರಳಿಯ ಎಂದು ಹೇಳಲಾದ ವ್ಯಕ್ತಿಗೆ ಮೃತದೇಹವನ್ನು ಹಸ್ತಾಂತರಿಸಲಾಗಿತ್ತು. 

ಆದರೆ ಪ್ರಭಾಕರ್‍ನ ನಿಜವಾದ ಸೋದರಳಿಯ ಪ್ರವೀಣ್ ಎಂಬಾತ ಕೋವಿಡ್‍ನಿಂದ ಅದಾಗಲೇ ಮೃತಪಟ್ಟಿದ್ದಾನೆಂದು ತಿಳಿದ ನಂತರ ಪೊಲೀಸರಿಗೆ ಸಂಶಯ ಎದುರಾಗಿತ್ತು. ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಿದ ಪೊಲೀಸರಿಗೆ ಪ್ರಭಾಕರ್ ಜೀವಂತವಾಗಿದ್ದಾನೆ ಹಾಗೂ ತನ್ನನ್ನು ಪ್ರವೀಣ್ ಎಂದು ಪರಿಚಯಿಸಿಕೊಂಡು ನಿರ್ಗತಿಕನ ಮೃತದೇಹವನ್ನು ತನ್ನ ಮೃತದೇಹವೆಂದು ಗುರುತಿಸಿದ್ದನೆಂದು ತಿಳಿದು ಬಂದಿತ್ತು.

ಮೃತವ್ಯಕ್ತಿಯನ್ನು 50 ವರ್ಷದ ನವನಾಥ್ ಯಶವಂತ್ ಆನಪ್ ಎಂದು ಗುರುತಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News