ಡ್ರಗ್ಸ್ ಪ್ರಕರಣ: ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದ ಬಾಂಬೆ ಹೈಕೋರ್ಟ್

Update: 2021-10-26 14:53 GMT

ಮುಂಬೈ: ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಮಾದಕವಸ್ತು ವಿರೋಧಿ ಸಂಸ್ಥೆ(ಎನ್ ಸಿಬಿ)ಯಿಂದ ಬಂಧಿಸಲ್ಪಟ್ಟಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್ ಬುಧವಾರ ಮಧ್ಯಾಹ್ನಕ್ಕೆ ಮುಂದೂಡಿದೆ.

ಅಕ್ಟೋಬರ್ 2 ರಂದು ಇಡೀ ಪ್ರಕರಣ ಆರಂಭವಾಯಿತು. ಪ್ರತೀಕ್ ಗಾಬಾ ಎಂಬುವವರು ಆರ್ಯನ್ ಅವರನ್ನು ಕ್ರೂಸ್ ಹಡಗಿಗೆ ಅತಿಥಿಯಾಗಿ ಆಹ್ವಾನಿಸಿದ್ದರು. ಆರ್ಯನ್ ರಿಂದ  ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಮತ್ತು ಆತನ  ಬಳಿ ಏನೂ ಇರಲಿಲ್ಲ.  ಆದಾಗ್ಯೂ 20 ದಿನಗಳಿಂದ ಆ ಹುಡುಗನನ್ನು ಜೈಲಿನಲ್ಲಿ ಏಕೆ ಇಡಲಾಗಿದೆ.  ಎನ್‌ಸಿಬಿ ವಶಪಡಿಸಿಕೊಂಡ ವಾಟ್ಸ್ ಆ್ಯಪ್  ಚಾಟ್‌ಗಳು  ಕ್ರೂಸ್ ಡ್ರಗ್ಸ್  ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ. 2018-19ರಲ್ಲಿ ಮಾಡಿದ್ದ ವಾಟ್ಸ್ ಆ್ಯಪ್ ಚಾಟ್ ಈಗ ಪ್ರಸ್ತಾವಿಸಲಾಗಿದೆ. ಆರ್ಯನ್ ಖಾನ್ ಡ್ರಗ್ಸ್ ಸೇವೆನೆ, ಮಾರಾಟ ಹಾಗೂ ಖರೀದಿಯಲ್ಲಿ ಭಾಗಿಯಾಗಿಲ್ಲ. ಖಾನ್ ರನ್ನು ಎನ್ ಸಿಬಿ ಟಾರ್ಗೆಟ್ ಮಾಡುತ್ತಿದೆ ಎಂದು ಹಿರಿಯ ವಕೀಲರು ಹಾಗೂ  ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಆರ್ಯನ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

"ಯಾವುದೇ ವಸ್ತುವನ್ನು ವಶಪಡಿಸಿಕೊಂಡಿಲ್ಲ ಅಥವಾ ಯಾವುದೇ ವಸ್ತುವನ್ನು ಸೇವಿಸದೇ ಇರುವಾಗ  ಆರ್ಯನ್ ಖಾನ್ ಯಾವ ಸಾಕ್ಷ್ಯವನ್ನು ಹಾಳುಮಾಡುತ್ತಾನೆ. ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಯುವಕನಿಗೆ ಜಾಮೀನು ನೀಡಬೇಕು’' ಎಂದು ರೋಹ್ಟಗಿ ಒತ್ತಾಯಿಸಿದರು.

ಮ್ಯಾಜಿಸ್ಟ್ರೇಟ್ ಹಾಗೂ  ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಆರ್ಯನ್ ಹೈಕೋರ್ಟ್‌ನಿಂದ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಅಕ್ಟೋಬರ್ 2 ರಂದು ನಡೆಸಿದ ದಾಳಿಯ ನಂತರ ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ವಶಪಡಿಸಿಕೊಂಡ ಬಳಿಕ ಬಂಧಿಸಲಾದ ಆರ್ಯನ್ ಖಾನ್ ಅವರ ಜಾಮೀನು ಅರ್ಜಿಯನ್ನು ವಿರೋಧಿಸಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಂಗಳವಾರ ಹೈಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News