ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಆರೋಪದಲ್ಲಿ ಡಿಬಾರ್: ಕಾಲೇಜು ಎದುರು ವಿದ್ಯಾರ್ಥಿಯ ಏಕಾಂಗಿ ಪ್ರತಿಭಟನೆ

Update: 2021-10-27 09:30 GMT

ಬೆಳ್ತಂಗಡಿ, ಅ.27: ಕಾಲೇಜಿನಿಂದ ಅಮಾನತು ಮಾಡಿರುವುದನ್ನು ವಿರೋಧಿಸಿ ವಿದ್ಯಾರ್ಥಿಯೋರ್ವ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಘಟನೆ ನಗರದಲ್ಲಿಂದು ನಡೆದಿದೆ.

ಕಾಲೇಜಿನ ನಿಯಮಗಳನ್ನು ಪಾಲಿಸದೆ ವಿದ್ಯಾರ್ಥಿ ಸಂಘಟನೆಯಲ್ಲಿ ಗುರುತಿಸಿಕೊಂಡ ಆರೋಪದಲ್ಲಿ ನಗರದ ವಾಣಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಅದ್ ಮುಹಮ್ಮದ್ ಎಂಬಾತನನ್ನು ಕಾಲೇಜು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಡಿಬಾರ್ ಹಿಂಪಡೆಯಬೇಕು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿ ಸಅದ್ ಮುಹಮ್ಮದ್ ಕಾಲೇಜಿನ ಮುಂಭಾಗದಲ್ಲಿ ಒಂಟಿ ಪ್ರತಿಭಟನೆ ನಡೆಸುತ್ತಿದ್ದಾನೆ.

ಇತ್ತೀಚೆಗೆ ವಾಣಿ ಪದವಿ ಪೂರ್ವ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಾಲೇಜಿನ ನಿಯಮಗಳನ್ನು ಪಾಲಿಸದೆ ವಿಧ್ಯಾರ್ಥಿ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡ ಬಗ್ಗೆ ಕಾಲೇಜಿನಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ಸಂಬಂಧ ಎಂಟು ವಿದ್ಯಾರ್ಥಿಗಳ ವಿರುದ್ದ ಕಾಲೇಜು ಆಡಳಿತ ಮಂಡಳಿ ಶಿಸ್ತು ಕ್ರಮ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಕಾಲೇಜು ಆಡಳಿತದೊಂದಿಗೆ ಸಮಾಲೋಚನೆ ನಡೆಸಿದ್ದರಿಂದ ಏಳು ವಿದ್ಯಾರ್ಥಿಗಳ ಮೇಲಿನ ಶಿಸ್ತು ಕ್ರಮವನ್ನು ಕೈಬಿಟ್ಟು ಮತ್ತೆ ಕಾಲೇಜಿಗೆ ಸೇರಿಸಿಕೊಳ್ಳಲಾಗಿದೆ. ಆದರೆ ಸಅದ್ ಮುಹಮ್ಮದ್ ನನ್ನು ಮಾತ್ರ ಶಾಲೆಯಿಂದ ಡಿಬಾರ್  ಮಾಡಲಾಗಿದೆ. ಇದನ್ನು ವಿರೋಧಿಸಿ ಆತ ಪ್ರತಿಭಟನೆ ನಡೆಸಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಲೇಜಿನ ಆಡಳಿತ ಮಂಡಳಿ, ವಿದ್ಯಾರ್ಥಿ ಸಅದ್ ಮುಹಮ್ಮದ್ ನಿರಂತರವಾಗಿ ಕಾಲೇಜಿನ ನಿಯಮಗಳನ್ನು ಪಾಲಿಸದೆ ಅಶಿಸ್ತಿನಿಂದ ವರ್ತಿಸಿದ್ದು, ಈ ಹಿಂದೆಯೂ ಈತನ ವಿರುದ್ದ ಕಾಲೇಜಿನಿಂದ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಆ ವೇಳೆ ಆತನ ಪೋಷಕರು ಬಂದು ಇನ್ನು ಮುಂದೆ ಇಂತಹ ಘಟನೆಗಳು ನಡೆದರೆ ಆತನನ್ನು ಕಾಲೇಜಿನಿಂದ ಡಿಬಾರ್ ಮಾಡಬಹುದು ಎಂದು ಸಮ್ಮತಿಸಿದ್ದರು. ಇದೀಗ ಮತ್ತೆ ಆತ ಸಂಸ್ಥೆಯ ಶಿಸ್ತನ್ನು ಉಲ್ಲಂಘಿಸಿದ್ದು, ಸಂಸ್ಥೆಯ ಹೆಸರನ್ನು ದುರುಪಯೋಗಪಡಿಸಿ ಪ್ರಾಂಶುಪಾಲರ, ಶಿಕ್ಷಕರ ವಿರುದ್ಧ ಮಾನಹಾನಿಕರ ವಿಚಾರಗಳನ್ನು ಪ್ರಚಾರ ಮಾಡುತ್ತಿದ್ದಾನೆ. ಈ ಬಗ್ಗೆ ಹಲವು ಬಾರಿ ಆಸೂಚನೆ ನೀಡಿದ ಬಳಿಕ ಇದೀಗ ಆತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News