ಸಚಿವ ಅಂಗಾರ ಮಾತುಕತೆ: ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಉಪವಾಸ ಧರಣಿ ಅಂತ್ಯ

Update: 2021-10-27 10:10 GMT

ಪುತ್ತೂರು, ಅ.27: ವೇತನ ಪಾವತಿ ವಿಳಂಬ ಮತ್ತು ನಿವೃತ್ತ ನೌಕರರ ಸೌಲಭ್ಯ ಪಾವತಿ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ವಿರುದ್ಧ ಆಮರಣಾಂತ ಉಪವಾಸ ನಿರತರಾಗಿದ್ದ ಪುತ್ತೂರು ವಿಭಾಗ ಕೆಎಸ್ಸಾರ್ಟಿಸಿ ಮಜ್ದೂರ್ ಸಂಘದ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಂಗಳವಾರ ರಾತ್ರಿ ನಡೆಸಿದ ಮಾತುಕತೆ ಪರಿಣಾಮ ತಮ್ಮ ಮುಷ್ಕರದಿಂದ ಹಿಂದೆ ಸರಿದಿದ್ದಾರೆ. ಸಚಿವ ಎಸ್. ಅಂಗಾರ ಅಮರಣಾಂತ ಉಪವಾಸ ನಿರತರಿಗೆ ಪಾನೀಯ ನೀಡುವ ಮೂಲಕ ನಿರಶನ ಮುಕ್ತಾಯಗೊಳಿಸಿದರು.

ಉಪವಾಸ ನಿರತರ ಮನವೊಲಿಸಿದ ಸಚಿವರು ಕೆಎಸ್ಸಾರ್ಟಿಸಿ ಆರ್ಥಿಕ ಸಂಕಷ್ಟದಲ್ಲಿದ್ದು ಈ ಕಾರಣದಿಂದ ಸಕಾಲದಲ್ಲಿ ವೇತನ ನೀಡಿಕೆ ಮತ್ತು ನಿವೃತ್ತ ನೌಕರರಿಗೆ ನಿವೃತ್ತಿ ಸೌಲಭ್ಯ ನೀಡಲು ತೊಂದರೆಯಾಗಿದೆ. ಕೆಎಸ್ಸಾರ್ಟಿಸಿ ಸಂಸ್ಥೆಯು ಆರ್ಥಿಕ ಸಂಕಷ್ಟದಿಂದ ಪಾರಾಗಲು ರೂ. 220 ಕೋಟಿಯನ್ನು ಬ್ಯಾಂಕ್‌ಗಳಿಂದ ಸಾಲ ಪಡೆಯಲಿದ್ದು ಸಂಸ್ಥೆಯ ಕಟ್ಟಡಗಳನ್ನು ಅಡ ಇರಿಸಿ ಈ ಸಾಲವನ್ನು ಪಡೆಯಲಾಗುತ್ತದೆ. ಈ ಪ್ರಕ್ರಿಯೆ ಒಂದು ತಿಂಗಳೊಳಗೆ ನಡೆಯಲಿದೆ. ಬಳಿಕ ವೇತನ ಮತ್ತು ನಿವೃತ್ತಿ ಸೌಲಭ್ಯವನ್ನು ವಿತರಿಸಲಾಗುವುದು. ಈ ಕುರಿತಂತೆ ಸಂಸ್ಥೆಯ ಉನ್ನತ ಅಧಿಕಾರಿಗಳು ಮತ್ತು ಸಾರಿಗೆ ಸಚಿವರೊಂದಿಗೆ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.

ಲಿಖಿತವಾಗಿ ಭರವಸೆ ನೀಡುವಂತೆ ಸತ್ಯಾಗ್ರಹ ನಿರತರು ಆರಂಭದಲ್ಲಿ ಆಗ್ರಹಿಸಿದರೂ ಕೊನೆಯ ಹಂತದಲ್ಲಿ ನೌಕರರು ಸಚಿವರ ಮಾತಿನ ಭರವಸೆಯಂತೆ ಅಮರಣಾಂತ ಉಪವಾಸವನ್ನು ಕೊನೆಗೊಳಿಸಿದರು.

ಈ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪುತ್ತೂರು ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಮುಖ್ಯ ಭದ್ರತಾಧಿಕಾರಿ ಶ್ರೀನಿವಾಸ್, ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಕೆ. ಜಯಕರ ಶೆಟ್ಟಿ, ಬಿಎಂಎಸ್ ಮುಂದಾಳುಗಳಾದ ನ್ಯಾಯವಾದಿ ಗಿರೀಶ್ ಮಳಿ, ಮಾಡಾವು ವಿಶ್ವನಾಥ್ ರೈ, ಶಾಂತಾರಾಮ ವಿಟ್ಲ, ವೆಂಕಟ್ರಮಣ ಭಟ್, ರಾಮಕೃಷ್ಣ ಜಿ., ಸತ್ಯಶಂಕರ ಭಟ್, ಸಂಜೀವ ಗೌಡ, ಕರುಣಾಕರ ಗೌಡ, ಮಹಾಬಲ ಗಡಿಮಾರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News