ಬಡಗನ್ನೂರು ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ: ಆರೋಪಿ ನಾರಾಯಣ ರೈ ನ್ಯಾಯಾಲಯಕ್ಕೆ ಶರಣು

Update: 2021-10-27 17:01 GMT
ಕುದ್ಕಾಡಿ ನಾರಾಯಣ ರೈ

ಪುತ್ತೂರು, ಅ.27: ಪುತ್ತೂರು ತಾಲೂಕಿನ ಬಡಗನ್ನೂರಿನ ಅಪ್ರಾಪ್ತ ವಯಸ್ಸಿನ ದಲಿತ ಯುವತಿಯ ಅತ್ಯಾಚಾರ ನಡೆಸಿ, ಆಕೆ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿ ಎಂದು ಬಾಲಕಿ ಹೆಸರಿಸಿರುವ ಆರೆಸ್ಸೆಸ್ ಮುಖಂಡ ಕುದ್ಕಾಡಿ ನಾರಾಯಣ ರೈ ಬುಧವಾರ ಪುತ್ತೂರಿನ ನ್ಯಾಯಾಲಯಕ್ಕೆ ಶರಣರಾಗಿದ್ದಾನೆ.

ನ್ಯಾಯಾಲಯವು ಆರೋಪಿಯನ್ನು 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ನಾರಾಯಣ ರೈ ತನ್ನ ಪರ ವಕೀಲರಾದ ಮಹೇಶ್ ಕಜೆ ಜೊತೆ ನ್ಯಾಯಾಲಯಕ್ಕೆ ಹಾಜರಾಗಿ ನ್ಯಾಯಾಧೀಶರ ಮುಂದೆ ಶರಣಾಗಿದ್ದಾನೆ. ಬಡಗನ್ನೂರಿನ 17ರ ಹರೆಯದ ದಲಿತ ಸಮುದಾಯದ ಬಾಲಕಿ ಸೆ.5ರಂದು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಂತ್ರಸ್ತೆಯ ಸಹೋದರನನ್ನೇ ಈ ಪ್ರಕರಣದ ಆರೋಪಿ ಎಂದು ಬಂಧಿಸಲಾಗಿತ್ತು.

ಸೆ.23ರಂದು ಸಂತ್ರಸ್ತೆಯು ನ್ಯಾಯಾಲಯಕ್ಕೆ ಹಾಜರಾಗಿ 164ರಡಿ ಹೇಳಿಕೆ ನೀಡಿದ್ದು, ಅದರಲ್ಲಿ ಕುದ್ಕಾಡಿ ನಾರಾಯಣ ರೈ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ನಾರಾಯಣ ರೈ ತಲೆಮರೆಸಿಕೊಂಡಿದ್ದನ್ನಲ್ಲದೆ ತನ್ನ ವಕೀಲ ಮಹೇಶ್ ಕಜೆ ಮೂಲಕ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ.

ಕೆಲ ದಿನಗಳ ಹಿಂದೆ ಆತನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿತ್ತು. ಆ ಬಳಿಕ ನಾರಾಯಣ ರೈ ತಲೆಮರೆಸಿ ಕೊಂಡಿದ್ದನು. ಬಳಿಕದ ಬೆಳವಣಿಗೆಯಲ್ಲಿ ನಾರಾಯಣ ರೈ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ. ಆರೋಪಿ ಕುದ್ಕಾಡಿ ನಾರಾಯಣ ರೈಯನ್ನು ವಿಚಾರಣೆಗಾಗಿ ಪುತ್ತೂರು ಸೆಷೆನ್ಸ್ ನ್ಯಾಯಾಲಯ ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶಿಸಿದೆ.

ನಾರಾಯಣ ರೈ ಪುತ್ತೂರಿನ ಸೆಷೆನ್ಸ್ ನ್ಯಾಯಾಲಯಕ್ಕೆ ಹಾಜರಾಗಿ ವಕೀಲರ ಮೂಲಕ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರಾಗಿ ವಿಶೇಷ ಸರಕಾರಿ ಅಭಿಯೋಜಕರ ಮೂಲಕ ಜಾಮೀನು ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ವಿಚಾರಣೆಗಾಗಿ ಆರೋಪಿ ನಾರಾಯಣ ರೈಯನ್ನು ಎರಡು ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಪ್ರಾಸಿಕ್ಯೂಷನ್ ಪರ ವಾದ ಪುರಸ್ಕರಿಸಿದ ನ್ಯಾಯಾಧೀಶರು ನಾರಾಯಣ ರೈಯನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

ಈ ಮಧ್ಯೆ ನಾರಾಯಣ ರೈ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಆಗ್ರಹಿಸಿದ್ದರು. ದಲಿತ ಸಮನ್ವಯ ಸಮಿತಿಯೂ ಅ.21ರಂದು ಸಂಪ್ಯ ಠಾಣೆ ಚಲೋ ಬೃಹತ್ ಪ್ರತಿಭಟನೆಯನ್ನೂ ನಡೆಸಿತ್ತು.

ಆಸ್ಪತ್ರೆಗೆ ದಾಖಲಾದ ಆರೋಪಿ

ಕುದ್ಕಾಡಿ ನಾರಾಯಣ ರೈಯನ್ನು ವಿಚಾರಣೆಗಾಗಿ ಪುತ್ತೂರು ಸೆಷೆನ್ಸ್ ನ್ಯಾಯಾಲಯ ಎರಡು ದಿನ ಪೊಲೀಸರ ವಶಕ್ಕೆ ಒಪ್ಪಿಸಿ ಆದೇಶದ ಬೆನ್ನಲ್ಲೆ ಅನಾರೋಗ್ಯದ ಕಾರಣ ನ್ಯಾಯಾಲಯದ ಅನುಮತಿಯೊಂದಿಗೆ ಆತ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆತ ದಾಖಲಾಗಿರುವ ಕೊಠಡಿಗೆ ಪೊಲೀಸ್ ಕಾವಲು ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News